ಕೊಡಗು ವಿವಿ ರದ್ದು, ವಿಲೀನಗೊಳಿಸುವ ಸರ್ಕಾರದ ಚಿಂತನೆಗೆ ಖಂಡನೆ

| Published : Feb 21 2025, 11:50 PM IST

ಕೊಡಗು ವಿವಿ ರದ್ದು, ವಿಲೀನಗೊಳಿಸುವ ಸರ್ಕಾರದ ಚಿಂತನೆಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ವಿವಿ ರದ್ದುಗೊಳಿಸುವ ಇತರ ವಿವಿ ಜೊತೆ ವಿಲೀನಗೊಳಿಸುವ ಸರ್ಕಾರದ ಚಿಂತನೆಯನ್ನು ತೀವ್ರವಾಗಿ ಖಂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸುವ ಅಥವಾ ಇತರ ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸುವ ಸರ್ಕಾರದ ಚಿಂತನೆಯನ್ನು ಕುಶಾಲನಗರ ಗೌಡ ಸಮಾಜ ಹಾಗೂ ಕುಶಾಲನಗರ ಗೌಡ ಯುವಕ ಸಂಘ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಕುಶಾಲನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲ‌ನ ಗಣಿಪ್ರಸಾದ್ ಹಾಗೂ ಗೌಡ ಒಕ್ಕೂಟದ ಖಜಾಂಚಿ ಆನಂದ್ ಕರಂದ್ಲಾಜೆ, 1908 ರಲ್ಲಿಯೇ ವಿದ್ಯೆಗೆ ಹೆಚ್ಚಿನ ಒತ್ತು ಕೊಟ್ಟು ಅಂದಿನ ದಿವ್ಯ ಚೇತನರಾದ ಕುಂಬುಗೌಡನ ಕುಶಾಲಪ್ಪ ಗೌಡ, ನ್ಯಾಯಾಧೀಶರಾದ ನಿಡ್ಯಮಲೆ ಮುದ್ದಪ್ಪ ಹಾಗೂ ಇನ್ನೂ ಹಲವು ಮಹನೀಯರ ದೂರದೃಷ್ಟಿಯಿಂದ ಕೇವಲ ಮಡಿಕೇರಿಯಲ್ಲಿ ಮಾತ್ರ ಇದ್ದ ಪದವಿ ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾಲದಲ್ಲಿ ಬಡ ಮಕ್ಕಳು ವಿದ್ಯೆ ಕಲಿಯಲು ಕಷ್ಟ ಇದ್ದ ಸಮಯದಲ್ಲಿ ವಿದ್ಯೆಯೇ ಅಭಿವೃದ್ಧಿಗೆ ಮೂಲ ಮಂತ್ರವೆಂಬುದನ್ನು ಮನಗಂಡು ಕೊಡಗು ಗೌಡ ವಿದ್ಯಾಸಂಘ ಸ್ಥಾಪಿಸಿ ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟು ಹಲವು ವಿದ್ಯಾರ್ಥಿಗಳು ಹೊರಬಂದು ಉನ್ನತ ಹುದ್ದೆಗೆ ಸೇರಲು ಕಾರಣಕರ್ತರಾದರು.

ನಂತರದ ದಿನಗಳಲ್ಲಿ ಸರ್ಕಾರಗಳ ವತಿಯಿಂದ ಹಲವಷ್ಟು ಶಾಲೆ ಕಾಲೇಜುಗಳು ಹಳ್ಳಿ ಹಳ್ಳಿಗಳಲ್ಲಿ ಸ್ಥಾಪಿಸಿ ಶಿಕ್ಷಣ ಕಡ್ಡಾಯಗೊಳಿಸಿ ಜನರ ಹಾಗೂ ದೇಶದ ಅಭಿವೃದ್ಧಿಗೆ ಮುನ್ನುಡಿ ಹಾಕಿದರು.

ಇಂತಹ ವ್ಯವಸ್ಥೆ ಮುಂದುವರೆದು ಉನ್ನತ ಶಿಕ್ಷಣ ವ್ಯಾಸಂಗಕ್ಕೆ ದೂರದ ಊರುಗಳಿಗೆ ಹೋಗಲು ಕೊಡಗಿನ ಬಡ ಮಕ್ಕಳಿಗೆ ತೊಂದರೆ ಹಾಗೂ ಅನಾನುಕೂಲ ವಾಗುವುದನ್ನು ಮನಗಂಡು ಹಿಂದಿನ ಆಡಳಿತ ನಡೆಸಿದ ಸರ್ಕಾರವು ನಮ್ಮ ಹಿಂದಿನ ಶಾಸಕರ ಪ್ರಯತ್ನದಿಂದ ಕೊಡಗು ವಿಶ್ವವಿದ್ಯಾನಿಲಯ ಸ್ಥಾಪಿಸಿ ಉತ್ತಮ ರೀತಿಯಲ್ಲಿ ನಡೆಯಲು ಅವಕಾಶ ಮಾಡಿ ಕೊಟ್ಟರು.

ಪ್ರತೀ ವ್ಯಕ್ತಿಯ ಹಾಗೂ ದೇಶದ ಅಭಿವೃದ್ಧಿಗೆ ವಿದ್ಯೆ ಹಾಗೂ ಆರೋಗ್ಯವೇ ಮುಖ್ಯವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸರ್ಕಾರದ ಯಾವುದೇ ಸಂಸ್ಥೆಯನ್ನು ಜಿಲ್ಲೆಗೆ ತರಲು ಹಲವು ಪ್ರಯತ್ನಗಳ ನಂತರ ಸಾಧ್ಯವಾಗುತ್ತದೆ. ಆದರೆ ಇದ್ದಂತಹ ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸುವ ಅಥವಾ ಬೇರೆ ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸುವುದು ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿದಂತಾಗುತ್ತದೆ ಎಂದರು.

ಸರ್ಕಾರ ಬೇರೆ ಯಾವುದೇ ಉಚಿತ ಭಾಗ್ಯವನ್ನು ಕೊಡುವುದಕ್ಕಿಂತ ವಿದ್ಯೆ ಹಾಗೂ ಆರೋಗ್ಯಕ್ಕೆ ಉಚಿತ ಘೋಷಿಸಿ ಅಭಿವೃದ್ಧಿಗೆ ಸಹಕರಿಸಲು ನಮ್ಮ ಜಿಲ್ಲೆಯ ಇಬ್ಬರು ಶಾಸಕರು ಸರ್ಕಾರವನ್ನು ಒತ್ತಾಯಿಸಿ ವಿ ವಿ.ಯನ್ನು ರದ್ದುಗೊಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇಲ್ಲದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡುವವರ ಜೊತೆಯಲ್ಲಿ ಕೈ ಜೋಡಿಸಿ ವಿ.ವಿ.ಉಳಿಸುವಲ್ಲಿ ನಾವು ಕೂಡ ಭಾಗಿಯಾಗುತ್ತೇವೆಂದು ಅವರು ಎಚ್ಚರಿಸಿದರು.

ಗೋಷ್ಠಿಯಲ್ಲಿ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಸಮಾಜದ ಉಪಾಧ್ಯಕ್ಷ ಸಟ್ಟೆಜನ ಗಣಪತಿ, ಕಾರ್ಯದರ್ಶಿ ಕುಲ್ಲಚನ ಹೇಮಂತ್, ಸಹ ಕಾರ್ಯದರ್ಶಿ ದಬ್ಬಡ್ಕ ಡಾಟಿ ಶಾಂತಕುಮಾರಿ, ಗುಡ್ಡೆಹೊಸೂರು ಗೌಡ ಸಮಾಜದ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್, ಗೌಡ ಸಮಾಜ ಮಾಜಿ ಅಧ್ಯಕ್ಷ ಕೂರನ ಪ್ರಕಾಶ್ ಇದ್ದರು.