ಅಧಿಕಾರ ದುರುಪಯೋಗ ಖಂಡಿಸಿ ಗ್ರಾಪಂಗೆ ಮುತ್ತಿಗೆ

| Published : Oct 23 2024, 12:34 AM IST

ಅಧಿಕಾರ ದುರುಪಯೋಗ ಖಂಡಿಸಿ ಗ್ರಾಪಂಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ದಿದ್ದಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುತ್ಯಮ್ಮ ಅವರ ಪುತ್ರ ರೇವಣಸಿದ್ದಪ್ಪ, ತಾನು ರೈತ ಸಂಘದ ಅಧ್ಯಕ್ಷ, ನಮ್ಮಮ್ಮ ಗ್ರಾಪಂ ಅಧ್ಯಕ್ಷೆ ಎಂದು ಹೇಳಿಕೊಂಡು, ಸಾರ್ವಜನಿಕ ಆಸ್ತಿಯಾದ ಹುಚ್ಚಂಗಿಪುರ ಗ್ರಾಮದ ಸಂತೆ ಮೈದಾನದಲ್ಲಿ ೧೦೦ * ೭೦ ಅಡಿ ಅಳತೆಯಷ್ಟು ಜಾಗಕ್ಕೆ ಇ-ಸ್ವತ್ತು ಮಾಡಿಕೊಂಡಿದ್ದಾರೆ. ಇದರಿಂದ ಗ್ರಾಪಂ ಅಧಿಕಾರ ದುರುಪಯೋಗ ಆಗಿದೆ ಎಂದು ಆರೋಪಿಸಿ ಹುಚ್ಚಂಗಿಪುರ ಗ್ರಾಮಸ್ಥರು ದಿದ್ದಿಗಿ ಗ್ರಾಪಂಗೆ ಸೋಮವಾರ ಬೀಗ ಜಡಿದು ಪ್ರತಿಭಟಿಸಿದ್ದಾರೆ.

- ಸಂತೆ ಮೈದಾನ ಜಾಗ ಕಬಳಿಕೆ ವಿರುದ್ಧ ಹುಚ್ಚಂಗಿಪುರ ಗ್ರಾಮಸ್ಥರ ಪ್ರತಿಭಟನೆ - - - ಕನ್ನಡ ಪ್ರಭವಾರ್ತೆ ಜಗಳೂರು

ದಿದ್ದಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುತ್ಯಮ್ಮ ಅವರ ಪುತ್ರ ರೇವಣಸಿದ್ದಪ್ಪ, ತಾನು ರೈತ ಸಂಘದ ಅಧ್ಯಕ್ಷ, ನಮ್ಮಮ್ಮ ಗ್ರಾಪಂ ಅಧ್ಯಕ್ಷೆ ಎಂದು ಹೇಳಿಕೊಂಡು, ಸಾರ್ವಜನಿಕ ಆಸ್ತಿಯಾದ ಹುಚ್ಚಂಗಿಪುರ ಗ್ರಾಮದ ಸಂತೆ ಮೈದಾನದಲ್ಲಿ ೧೦೦ * ೭೦ ಅಡಿ ಅಳತೆಯಷ್ಟು ಜಾಗಕ್ಕೆ ಇ-ಸ್ವತ್ತು ಮಾಡಿಕೊಂಡಿದ್ದಾರೆ. ಇದರಿಂದ ಗ್ರಾಪಂ ಅಧಿಕಾರ ದುರುಪಯೋಗ ಆಗಿದೆ ಎಂದು ಆರೋಪಿಸಿ ಹುಚ್ಚಂಗಿಪುರ ಗ್ರಾಮಸ್ಥರು ದಿದ್ದಿಗಿ ಗ್ರಾಪಂಗೆ ಸೋಮವಾರ ಬೀಗ ಜಡಿದು ಪ್ರತಿಭಟಿಸಿದರು.

ನೇತೃತ್ವ ವಹಿಸಿದ್ದ ಗ್ರಾಪಂ ಸದಸ್ಯ ಬಿ.ಟಿ. ವೆಂಕಟೇಶ್ ಮಾತನಾಡಿ, ಹಾಲಿ ಗ್ರಾಪಂ ಅಧ್ಯಕ್ಷೆ ಗುತ್ಯಮ್ಮ ಅವರ ಮಗ ರೇವಣಸಿದ್ದಪ್ಪ ಕಾನೂನು ಬಾಹಿರವಾಗಿ ಸಂತೆ ಮೈದಾನದ ಜಾಗ ಪಡೆದಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗ್ರಾಪಂ ಅಧ್ಯಕ್ಷರ ಅಧಿಕಾರ ರದ್ದುಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸದಸ್ಯ ಬಾಲರಾಜ್ ಮಾತನಾಡಿ, ಹಾಲಿ ಅಧ್ಯಕ್ಷರ ಅಧಿಕಾರವಧಿಯಲ್ಲಿ ೧೫ನೇ ಹಣಕಾಸು ಯೋಜನೆಯಡಿ ₹೪೫ ಲಕ್ಷ ಅಕ್ರಮ ಎಸಗಿದ್ದಾರೆ. ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದೇ, ನಕಲಿ ಬಿಲ್ ಸೃಷ್ಟಿಸಿ, ಹಣ ದೋಚಿದ್ದಾರೆ ಎಂದು ಆರೋಪಿಸಿದರು.

ಸದಸ್ಯ ಮುಕುಂದ ಮಾತನಾಡಿ, ಗ್ರಾಮ ಸಭೆಗಳು, ವಾರ್ಡ್‌ ಸಭೆಗಳು ಮತ್ತು ಸಾಮಾನ್ಯ ಸಭೆಗಳನ್ನೇ ನಡೆಸಿಲ್ಲ. ಸದಸ್ಯರ ಗಮನಕ್ಕೆ ವಿಷಯಗಳ ತಾರದೇ ವಾಲ್ಮೀಕಿ ಜಯಂತಿಯಂದು ₹೩.೫೬ ಲಕ್ಷ ಹಣ ಬಿಡಿಸಿಕೊಂಡಿದ್ದಾರೆ ಎಂದರು.

ಪ್ರತಿಭಟನೆ ಬಳಿಕ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದ ಮುಖಂಡರಾದ ಗುರಪ್ಪ, ಧರ್ಮ ನಾಯ್ಕ್, ರವಿ ಯು.ಸಿ., ಗ್ರಾಪಂ ಸದಸ್ಯರಾದ ಹನುಮಂತ್, ವೀರೇಶ್, ತಿಮ್ಮಪ್ಪ, ತಿಪ್ಪೇಶ್, ರಾಜಪ್ಪ, ಚಂದ್ರಪ್ಪ, ನಾಗರಾಜ್ ಮತ್ತಿತರರು ಭಾಗಹಿಸಿದ್ದರು.

- - - -21ಜೆಜಿಎಲ್೦1:

ಸಂತೆ ಮೈದಾನ ಜಾಗ ದುರುಪಯೋಗ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಹುಚ್ಚಂಗಿಪುರ ಗ್ರಾಮಸ್ಥರು ದಿದ್ದಿಗಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದರು.