ಸಾರಾಂಶ
ಜಮ್ಮು-ಕಾಶ್ಮೀರದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರ ಮೇಲೆ ಉಗ್ರ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಗದಗ: ಜಮ್ಮು-ಕಾಶ್ಮೀರದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರ ಮೇಲೆ ಉಗ್ರ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಅಧ್ಯಕ್ಷ ಶ್ರೀಧರ ಕುಲಕರ್ಣಿ ಅವರು, ಜೂ. 9ರಂದು ಜಮ್ಮು-ಕಾಶ್ಮೀರದಲ್ಲಿ ವೈಷ್ಣೋದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುತ್ತಿದ್ದ ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಪೋಷಿತ ಇಸ್ಲಾಮಿಕ್ ಜಿಹಾದಿಗಳು ಭಯೋತ್ಪಾದಕ ಕೃತ್ಯ ನಡೆಸಿದ್ದು, ಅದರಲ್ಲಿ 10 ನಿರ್ದೋಷಿ ಹಿಂದೂ ಯಾತ್ರಿಕರು ಮರಣ ಹೊಂದಿದ್ದಾರೆ. 40 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕ್ರೂರ ಕೃತ್ಯದಿಂದ ಸಂಪೂರ್ಣ ದೇಶ ಆಘಾತಗೊಂಡಿದೆ ಮತ್ತು ತೀವ್ರ ಆಕ್ರೋಶದಲ್ಲಿದೆ ಎಂದು ಹೇಳಿದರು.ಜಮ್ಮು ಕಾಶ್ಮೀರವು ಪಾಕಿಸ್ತಾನ ಪೋಷಿತ ಭಯೋತ್ಪಾದನೆಯಿಂದ ಇನ್ನೂ ಮುಕ್ತವಾಗಿಲ್ಲ. 370ನೇ ವಿಧಿಯನ್ನು ರದ್ದುಪಡಿಸಿದ ಆನಂತರ ಒಂದು ಆಶಾದೀಪ ಬೆಳಗಿತ್ತು. ಆದರೆ ಉಗ್ರರ ಅಟ್ಟಹಾಸವು ಇನ್ನೂ ಕಡಿಮೆಯಾಗಿಲ್ಲ. ಹಿಂದೂಗಳನ್ನು ಗುರುತಿಸಿ ಅವರ ಹತ್ಯೆಗೀಡು ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದರಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ದೇಶದ ಹೊಸ ಸರ್ಕಾರದ ಪ್ರಮಾಣವಚನದ ಸಮಯದಲ್ಲಿ ಇಂತಹ ಹೇಯ ಕೃತ್ಯವನ್ನು ಮಾಡಿ, ಇಸ್ಲಾಮಿಕ್ ಭಯೋತ್ಪಾದಕರು ದೇಶದ ಸ್ವಾಯತ್ತತೆಗೆ ಸವಾಲು ನೀಡಿದಂತಾಗಿದೆ. ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಕೇಂದ್ರ ಸರ್ಕಾರ ಭಯೋತ್ಪಾದಕ ಕೃತ್ಯಗಳಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಕೋಶಾಧ್ಯಕ್ಷ ಮಾರುತಿ ಪವಾರ, ಮಾಜಿ ಅಧ್ಯಕ್ಷ ಪ್ರೊ. ಪಿ.ಆರ್. ಇನಾಮದಾರ, ಸುಧೀರ ಕಾಟಿಗರ, ಅಂಗಡಿ ಎಂಜಿನಿಯರ್, ವಿಲಾಸ ಕೊಪ್ಪಳ, ಬಸವರಾಜ ಬೆಳವಟಗಿ, ಸಚಿನ್ ಸಾಬಳೆ, ಡಾ. ಗಣೇಶ ಸುಲ್ತಾನಪುರ, ಬಸವರಾಜ ಉಪಸ್ಥಿತರಿದ್ದರು.