ಸಾರಾಂಶ
ಕಲಘಟಗಿ ತಾಲೂಕು ಸಹಬಾಳ್ವೆಗೆ ಹೆಸರಾಗಿದೆ. ಕಿಡಿಗೇಡಿಗಳು ಮಾಡುವ ಕೃತ್ಯವನ್ನು ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆ ಸಹಿಸುವುದಿಲ್ಲ ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಅಜಮತಖಾನ್ ಜಾಗೀರದಾರ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕಲಘಟಗಿ
ಹಸರಂಬಿ ಗ್ರಾಮದ ಇಬ್ಬರು ಯುವಕರು ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿರುವ ಘಟನೆ ಖಂಡನಾರ್ಹವಾಗಿದೆ. ಕಲಘಟಗಿ ತಾಲೂಕು ಸಹಬಾಳ್ವೆಗೆ ಹೆಸರಾಗಿದೆ. ಕಿಡಿಗೇಡಿಗಳು ಮಾಡುವ ಕೃತ್ಯವನ್ನು ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆ ಸಹಿಸುವುದಿಲ್ಲ ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಅಜಮತಖಾನ್ ಜಾಗೀರದಾರ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಮಾರುಕಟ್ಟೆಯಲ್ಲಿರುವ ದರ್ಗಾದಲ್ಲಿ ಬುಧವಾರ ಮುಸ್ಲಿಂ ಬಾಂಧವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ತಾಲೂಕಿನಲ್ಲಿ ಈ ಹಿಂದೆ ಇಂತಹ ಯಾವುದೇ ಘಟನೆ ಜರುಗಿರಲಿಲ್ಲ. ಮುಸ್ಲಿಮರು ಹಾಗೂ ಹಿಂದೂಗಳು ಅವಿನಾಭಾವ ಸಂಬಂಧ ಹೊಂದಿದ್ದೇವೆ. ಎಲ್ಲ ಧರ್ಮಗಳ ಎಲ್ಲ ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಆದರೆ ಕಿಡಿಗೇಡಿಗಳು ಮಾಡುವ ತಪ್ಪನ್ನು ಯಾರು ಕ್ಷಮಿಸುವುದಿಲ್ಲ ಎಂದರು.
ಹಸರಂಬಿ ಗ್ರಾಮದ ಇಬ್ಬರು ಯುವಕರು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಡಿರುವ ಅವಮಾನವನ್ನು ನಾವು ಖಂಡಿಸಿದ್ದು, ಘಟನೆ ಕುರಿತಂತೆ ತಾಲೂಕಿನ ಮುಸ್ಲಿಂ ಬಾಂಧವರು ಸೇರಿ ಗುರುವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೇ ಈ ಪೋಸ್ಟ್ ಎಲ್ಲಿಂದ ಬಂತು. ಯಾರು ಈ ಕೃತ್ಯಕ್ಕೆ ಕಾರಣ ಆಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರಿಗೂ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ಮುಸ್ಲಿಂ ಸಮಾಜದ ಮುಖಂಡರಾದ ಬಾಷಾಸಾಬ್ ಕಾಲಿಗಾರ, ಅಬ್ದುಲ್ ಲತೀಫ್, ಮಹಬೂಬಅಲಿ ಜಂಡೇವಾಲೆ, ಹಸನಸಾಬ್ ಗಂಜಿಗಟ್ಟಿ, ಮಹಬೂಬಅಲಿ ದಲಾಲ್, ಅಬ್ದುಲಸಾಬ್ ಗಾಡಿವಾಲೆ, ದಾವಲಸಾಬ್ ಓಲೇಕಾರ, ನಾಸಿರ್ ಧಾರವಾಡ, ಸಾದಿಕಬೇಗ ಮುಲ್ಲಾ, ಬಾಬಾಜಾನ್ ಮಕಾನದಾರ, ಆಜಾದ್ ಮಲಿಕನವರ, ಸಿಕಂದರಬಾಷಾ ಬೇಪಾರಿ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಹಾಜರಿದ್ದರು.