ಸರ್ಕಾರಗಳ ರೈತ ವಿರೋಧಿ ನೀತಿಗೆ ಖಂಡನೆ

| Published : Nov 16 2024, 12:30 AM IST

ಸಾರಾಂಶ

ರೈತ ಸಮೂಹವನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೈಮನಗಳು ಜಿಡ್ಡುಗಟ್ಟಿದ್ದು, ಚುರುಕು ಮುಟ್ಟಿಸಲು ರೈತರು ಹೋರಾಟ ತೀವ್ರಗೊಳಿಸಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎನ್.ಕೆ. ಮಂಜುನಾಥಗೌಡ ನಿಸರಾಣಿ ಕರೆನೀಡಿದರು.

ಕನ್ನಡಪ್ರಭ ವಾರ್ತೆ ಸೊರಬ

ರೈತ ಸಮೂಹವನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೈಮನಗಳು ಜಿಡ್ಡುಗಟ್ಟಿದ್ದು, ಚುರುಕು ಮುಟ್ಟಿಸಲು ರೈತರು ಹೋರಾಟ ತೀವ್ರಗೊಳಿಸಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎನ್.ಕೆ. ಮಂಜುನಾಥಗೌಡ ನಿಸರಾಣಿ ಕರೆನೀಡಿದರು.ಶುಕ್ರವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ವ್ಯತಿರಿಕ್ತ ವಾತಾವರಣದಿಂದ ಮತ್ತು ಆಗಾಗ್ಗೆ ಸುರಿಯುವ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ನಾಡಿನ ರೈತರು ಪ್ರತಿದಿನ ಸಂಕಷ್ಟ ಬದುಕನ್ನು ಎದುರಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳು ಕೈಗೆ ಸಿಗದೇ ಕಷ್ಟದಲ್ಲಿದ್ದರೂ ಕಳೆದ ವರ್ಷದ ಬರಗಾಲ ಪರಿಹಾರವನ್ನು ಇದುವರೆಗೂ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತರನ್ನು ನಿಕೃಷ್ಟವಾಗಿ ಕಾಣುತ್ತಿರುವ ಸರ್ಕಾರಗಳು ಜಿಡ್ಡಿಗಟ್ಟಿದ್ದು, ರೈತರು ಎಚ್ಚೆತ್ತುಕೊಂಡು ಸರ್ಕಾರಗಳ ವಿರುದ್ಧ ದಂಗೆ ಏಳುವ ಕಾಲ ಸನ್ನಿಹಿತವಾಗಿದೆ ಎಂದರು.ಸರ್ಕಾರ ರೈತರ ಸಾಲಗಳನ್ನು ಮನ್ನ ಮಾಡಬೇಕು ಹಾಗೂ ಎಂಎಸ್‌ಪಿ ಕಾಯ್ದೆಯನ್ನು ಕಾನೂನು ಬದ್ಧ ಜಾರಿಗೆ ತರಬೇಕು. ಈ ವರ್ಷ ಅತಿವೃಷ್ಟಿ ಹಾನಿಯಿಂದ ಅಡಿಕೆ, ಶುಂಠಿ, ಜೋಳ, ಭತ್ತದ ಬೆಳೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದು, ಈ ಬೆಳೆಗಳಿಗೆ ತಕ್ಷಣ ಪರಿಹಾರ ಮತ್ತು ಬೆಳೆ ವಿಮೆ ನೀಡಬೇಕೆಂದು ಒತ್ತಾಯಿಸಿದರು.ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್ ಎನ್. ಪಾಟೀಲ್ ಪ್ರತಿಭಟನಾ ನೇತೃತ್ವ ವಹಿಸಿ ಮಾತನಾಡಿ, ತಾಲೂಕಿನ ಬಗರ್‌ಹುಕಂ ರೈತರನ್ನು ಒಕ್ಕಲಿಬ್ಬಿಸುವುದನ್ನು ತಕ್ಷಣ ನಿಲ್ಲಿಸಿ ಅರಣ್ಯ ಭೂಮಿಯನ್ನು ಮಂಜೂರು ಮಾಡುವ ಕಾಯಿದೆ ಸರಳಿಕರಿಸುವ ಕ್ರಮ ಕೈಗೊಳ್ಳಬೇಕು. ರೈತರ ಸ್ವಾಧೀನದ ಭೂಮಿಯನ್ನು ವಕ್ಫ್ ಬೋರ್ಡಿಗೆ ತಿದ್ದುಪಡಿ ಮಾಡುವ ಕ್ರಮವನ್ನು ತಕ್ಷಣ ಕೈಬಿಡಬೇಕು ಮತ್ತು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಆರೆಕೊಪ್ಪ, ರೈತ ಮುಖಂಡರಾದ ಹಾಲೇಶಪ್ಪಗೌಡ, ಶಫಿವುಲ್ಲಾ, ಶಿವಣ್ಣ ಹುಣಸವಳ್ಳಿ, ಬಾಷಾ ಸಾಬ್, ಮೇಘರಾಜ್, ಹನುಮಂತಪ್ಪ, ವಿಜಯಗೌಡ, ಸುನಿತಾ, ಸುರೇಶ್ ನಾಯಕ್, ಅನಂತಪ್ಪ ಕುಳವಳ್ಳಿ ಸೇರಿದಂತೆ ಮೊದಲಾದವರಿದ್ದರು.