ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಖಾಸಗಿ ಸಕ್ಕರೆ ಕಾರ್ಖಾನಗೆಳ ರೈತ ವಿರೋಧಿ ನೀತಿ ಖಂಡಿಸಿ ಸೋಮವಾರ ತಾಲೂಕು ರೈತ ಸಂಘದ ಕಾರ್ಯಕರ್ತರು ಎತ್ತಿನ ಗಾಡಿಯಲ್ಲಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ರೈತರು ಟನ್ ಕಬ್ಬಿನ ಬಾಕಿ 50 ರು. ನೀಡದೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮದ್ದೂರು ತಾಲೂಕು ಕೊಪ್ಪದ ಎನ್‌ಎಸ್‌ಎಲ್ ಮತ್ತು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಸರ್ಕಾರ ಘೋಷಿಸಿರುವ ಕಾರ್ಖಾನೆಯ ಪಾಲು ಟನ್ ವೊಂದಕ್ಕೆ 50 ರು.ಗಳನ್ನು ರಾಜ್ಯದ ಕೆಲವು ಕಾರ್ಖಾನೆಗಳು ಈಗಾಗಲೇ ರೈತರಿಗೆ ಪಾವತಿಸಿವೆ. ಆದರೆ, ಕೊಪ್ಪದ ಎನ್‌ಎಸ್‌ಎಲ್ ಹಾಗೂ ಕೆ.ಎಂ.ದೊಡ್ಡಿಯ ಚಾಂಷುಗರ್ಸ್ ಕಾರ್ಖಾನೆಗಳು 50 ರು. ಪಾವತಿ ಮಾಡದೇ ಇದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದನ್ನು ತೀವ್ರವಾಗಿ ಖಂಡಿಸಿದರು.

ಕೂಡಲೇ ಕಾರ್ಖಾನೆಗಳು ತಡೆಯಾಜ್ಞೆ ವಾಪಸ್ ಪಡೆದು ರೈತರಿಗೆ 50 ರು. ಪ್ರೋತ್ಸಾಹಧನ ಪಾವತಿಸಬೇಕು. 2025-26ನೇ ಸಾಲಿನಲ್ಲಿ ನುರಿಸಿದ ಕಬ್ಬಿಗೆ ರಾಜ್ಯ ಸರ್ಕಾರವು ಘೋಷಿಸಿರುವ 100 ರು. ಗಳನ್ನು ಸರ್ಕಾರವು ತನ್ನ ಪಾಲಿನ 50 ರು.ಗಳನ್ನು ಈಗಾಗಲೇ ಕಬ್ಬು ಬೆಳೆಗಾರರಿಗೆ ಪಾವತಿಸಿದೆ. ಆದರೆ, ಚಾಂಷುಗರ್ ಕಾರ್ಖಾನೆ ಮತ್ತು ಕೊಪ್ಪದ ಎನ್ ಎಸ್ ಎಲ್ ತನ್ನ ಪಾಲಿನ 50 ರು.ಪಾವತಿಸಬೇಕು ಎಂದು ಒತ್ತಾಯಿಸಿದರು.


ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರವು ಎಫ್‌ಆರ್‌ಪಿ ದರ 10.25ಕ್ಕೆ ರಿವರೇಜ್‌ ಮಾನ ದಂಡವನ್ನು ಇಟ್ಟುಕೊಂಡು ಬೆಲೆ ನಿಗದಿ‌ ಮಾಡಿದೆ. ಈ ಬೆಲೆ ಅವೈಜ್ಙಾನಿಕವಾಗಿದೆ. ಕೇಂದ್ರ ಸರ್ಕಾರ 9.5 ಇಳುವರಿ ಮಾನದಂಡ ಇಟ್ಟುಕೊಂಡು ಕನಿಷ್ಠ ಟನ್ ಕಬ್ಬಿಗೆ 5000 ರು. ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ಇರುವಂತೆ ಕಬ್ಬು ಕಟಾವು ಮತ್ತು ಸಾಗಣಿಕೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸುತ್ತಿವೆ. ಅದರಂತೆ ತಾವು ಕೂಡ ಈ ವೆಚ್ಚ ಭರಿಸುವಂತೆ ಚಾಂಷುಗರ್ ಹಿರಿಯ ಉಪಾಧ್ಯಕ್ಷ ಮಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮಣಿ ಅವರು, ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕಾರ್ಖಾನೆ ಹಿತ ದೃಷ್ಟಿಯಿಂದ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಸರ್ಕಾರ ಸ್ಪಂದಿಸಿದ ತಕ್ಷಣ ಬಾಕಿ ಹಣ ಪಾವತಿ ಮಾಡುತ್ತೇವೆ. ರೈತರಿಂದ ರೈತರಿಗೋಸ್ಕರನೇ ಕಾರ್ಖಾನೆ ನಡೆಸುತ್ತಿದ್ದೇವೆ. ರೈತರ ಪರ ಇರುತ್ತದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎ.ಶಂಕರ್, ಪ್ರಧಾನ ಕಾರ್ಯದರ್ಶಿ ನಿಂಗಪ್ಪಾಜಿ, ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್, ವೃತ್ತ ಘಟಕದ ಅಧ್ಯಕ್ಷ ಸಿದ್ದರಾಜು ಕಳ್ಳಿಮೆಳೆದೊಡ್ಡಿ, ತಾಲೂಕು ಉಪಾಧ್ಯಕ್ಷ ಮುಟ್ಟನಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಸಿ.ಎ.ಕೆರೆ ಮಹದೇವು, ಡಿ.ಎ.ಕೆರೆ ರಮೇಶ್, ಮಾದರಹಳ್ಳಿ ದೇಶಿಗೌಡ, ಗುರುದೇವರಹಳ್ಳಿ ಬೋರೇಗೌಡ, ಕೃಷ್ಣ ಅಣ್ಣೂರು, ಬನ್ನಹಳ್ಳಿ ರಮೇಶ, ನಾಗಲಿಂಗು ಮಾದರಹಳ್ಳಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.