ನಾಸೀರ್ ಬೆಂಬಲಿಗರ ದೇಶ ವಿರೋಧಿ ಘೋಷಣೆ ಖಂಡನೆ

| Published : Mar 01 2024, 02:17 AM IST

ಸಾರಾಂಶ

ವಿವಿಧ ಸಂಘಟನೆಗಳ ಮುಖಂಡರು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರತಿಕೃತಿ ದಹಿಸಿ ಸರ್ಕಾರ ಮತ್ತು ಪಾಕ್ ಪರ ಘೋಷಣೆ ಕೂಗಿದ ಕಿಡಿಗೇಡಿಗಳು ಹಾಗೂ ನಾಸಿರ್ ಹುಸೇನ್ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಪತ್ರಕರ್ತರನ್ನು ಏಕವಚನದಲ್ಲಿ ನಿಂದಿಸಿದ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಈ ಕೂಡಲೇ ರಾಜ್ಯಸಭಾ ಸದಸ್ಯ ಸ್ಥಾನದಿಂದ ಕೈ ಬಿಟ್ಟು, ದೇಶ ವಿರೋಧಿ ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಾಸಿರ್ ಹುಸೇನ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಚನ್ನಬಸಪ್ಪ ವೃತ್ತದಲ್ಲಿ ಜಮಾವಣೆಗೊಂಡಿದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರತಿಕೃತಿ ದಹಿಸಿ ಸರ್ಕಾರ ಮತ್ತು ಪಾಕ್ ಪರ ಘೋಷಣೆ ಕೂಗಿದ ಕಿಡಿಗೇಡಿಗಳು ಹಾಗೂ ನಾಸಿರ್ ಹುಸೇನ್ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಬೆಂಬಲಿಗರು ವಿಧಾನಸೌದ ದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು, ನಮ್ಮ ಸಂಘಟನೆ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಇಂತಹ ಹೇಳಿಕೆಯನ್ನು ನಾಗರಿಕ ಸಮಾಜ ಪಕ್ಷಾತೀತವಾಗಿ ಖಂಡಿಸಬೇಕಿದೆ. ದೇಶ ವಿರೋಧಿ ಘೋಷಣೆ ಕೂಗಿದ ಆರೋಪಿಯನ್ನು ಪೋಷಣೆ ಮಾಡುತ್ತಿರುವ ಸರ್ಕಾರದ ಮುಖ್ಯಮಂತ್ರಿಯವರೂ ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿದರು.

ರಾಜ್ಯಸರ್ಕಾರ ಮತ್ತು ಮುಖ್ಯಮಂತ್ರಿಯವರು ಸಂವಿಧಾನದಡಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರತಿದಿನವೂ ಬೊಬ್ಬೆ ಹೊಡೆಯುತ್ತಾರೆ, ಇಂತಹ ದೇಶ ವಿರೋಧಿ ಘೋಷಣೆ ಕೂಗುವುದು ಸಂವಿಧಾನದ ವಿರೋಧಿ ನಡೆಯಲ್ಲವೇ? ಇವರು ಸಂವಿಧಾನದ ಹೆಸರೇಳುತ್ತಾ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ, ಇಂತಹ ದೇಶ ವಿರೋಧಿಗಳನ್ನು ರಕ್ಷಿಸಲು ಕೆಲವು ಕಾಂಗ್ರೆಸ್ ಸಚಿವರು ನಿಂತಿದ್ದಾರೆ, ಉಪಮುಖ್ಯಮಂತ್ರಿಯವರೂ ಸಹ ಇವರು ನಮ್ಮ ಸಹೋದರರು ಎಂದು ಹೇಳುತ್ತಾರೆ, ಕಾಂಗ್ರೆಸ್‌ನವರು ದೇಶದ್ರೋಹಿಗಳ ಪರವಾಗಿ ನಿಂತಿದ್ದಾರೆ ಎಂದು ಜನಸಾಮಾನ್ಯರಿಗೆ ತಿಳಿದಿದೆ, ಕನ್ನಡಿಗರು ದೇಶ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ, ಇಂತಹವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ, ಇಂಥವರಿಗೆ ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಮುಖಂಡರಾದ ನಲ್ಲಹಳ್ಳಿ ಶ್ರೀನಿವಾಸ್, ಶಿವರಾಜು, ಜಯ ಕರ್ನಾಟಕ ಜನಪರ ವೇದಿಕೆ ಕೆ.ಆರ್. ಸುರೇಶ್, ಕನ್ನಡ ಸೇನೆ ಜಯಸಿಂಹ, ಕರವೇ ಭಾಸ್ಕರ್, ನೇಗಿಲ ಯೋಗಿ ಟ್ರಸ್ಟ್ ನ ಕಾಡೇಗೌಡ, ಅಪ್ಪಾಜಿ, ವೈಭವ ಕರ್ನಾಟಕದ ಪುಟ್ಟ ಲಿಂಗಯ್ಯ, ದುರ್ಗೇಶ್, ಮಂಗಳಮ್ಮ, ನೇತ್ರ ಸೇರಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.