ಸಾರಾಂಶ
ಔರಾದ್ ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಬುಧವಾರ ಎಬಿವಿಪಿಯಿಂದ ವಿದ್ಯಾರ್ಥಿಗಳ ಬಸ್‌ಪಾಸ್ ವಿಳಂಬ ಧೋರಣೆ ಖಂಡಿಸಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ವಿನ ಬಸ್ಸುಗಳು ಓಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.
ಔರಾದ್:
ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಬುಧವಾರ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳ ಬಸ್‌ಪಾಸ್ ವಿಳಂಬ ಧೋರಣೆ ಖಂಡಿಸಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ವಿನ ಬಸ್ಸು ಓಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.ಔರಾದ್ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಕರ್ನಾಟಕದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯಲು ಅತೀ ಹೆಚ್ಚು ನಗರ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭವಾದ ನಂತರ ಸರಿಯಾದ ಸಮಯಕ್ಕೆ ಬಸ್‌ಪಾಸ್ ವಿತರಣೆ ಮಾಡದೇ ಇರುವ ಕಾರಣ ಪ್ರತಿದಿನ ನೂರಾರು ರುಪಾಯಿ ಖರ್ಚು ಮಾಡಿಕೊಂಡು ಬರುವುದು ಭಾರವಾಗಿ ಪರಿಣಮಿಸಿದೆ.
ವಿದ್ಯಾರ್ಥಿಗಳು ಬಸ್ಸಿನ ಬಾಗಿಲಲ್ಲಿ ನಿಂತು ಅಪಾಯದ ಪ್ರಯಾಣ ಮಾಡುವುದು ಕಂಡು ಬರುತ್ತಿದೆ. ಸರ್ಕಾರ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ನಿರ್ಧಾರ ಮಾಡಬೇಕು, ಯಾವ ಹಳ್ಳಿಗಳಿಗೆ ಬಸ್ ಗಳ ಕೊರತೆ ಇದೆ ಆ ಹಳ್ಳಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆಯನ್ನು ಶಾಲಾ-ಕಾಲೇಜುಗಳ ಸಮಯಕ್ಕೆ ಒದಗಿಸಬೇಕೆಂದು ಔರಾದ ಶಾಖೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತದೆ ಎಂದ ಜಿಲ್ಲಾ ಸಂಚಾಲಕ ಶಶಿಕಾಂತ ಯಾರಕಲೆ ಹೇಳಿದರು.ಈ ಸಂದರ್ಭದಲ್ಲಿ ಔರಾದ ಪೊಲೀಸ್ ಠಾಣೆಯ ಪಿಎಸ್ಐ ಉಪೇಂದ್ರ, ಎಬಿವಿಪಿ ಮುಖಂಡ ಅನೀಲ ಮೇತ್ರೆ, ಅಶೋಕ ಶೆಂಬೆಳ್ಳಿ, ಅಂಬಾದಾಸ ನೆಳಗೆ, ಪ್ರಶಾಂತ ಔರಾದೆ, ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಇಂದ್ರಾಣಿ ಸಗರ, ಪೂಜಾ, ಗಾಯತ್ರಿ, ಅನೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.