ಅಬ್ದುಲ್ ಜಬ್ಬಾರ್ ಅವರು ಕರ್ನಾಟಕ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ಪ್ರಾಮಾಣಿಕತೆ, ಸರಳತೆ ಮತ್ತು ಪಕ್ಷನಿಷ್ಠೆಯಿಂದ ಜನಮನ ಗೆದ್ದಿದ್ದರು. ಇಂತಹ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಆರೋಪ, ಪ್ರತ್ಯಾರೋಪಗಳ ಮೂಲಕ ರಾಜೀನಾಮೆ ಪಡೆದು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಅನ್ಯಾಯ ಎಂದು ಅವರು ಹೇಳಿದರು. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಶೇ.೯೨ರಷ್ಟು ಮತದಾನ ಮಾಡಿದ್ದು, ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಸಾಮಾಜಿಕ ನ್ಯಾಯದ ನಿರೀಕ್ಷೆಯಿಂದ ಪಕ್ಷವನ್ನು ಬೆಂಬಲಿಸಿದೆ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ರಾಜಕೀಯ ನಾಯಕರನ್ನು ಹುದ್ದೆಗಳಿಂದ ವಜಾಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿ, ಅವರಿಗೆ ಮರು ನಾಮಕರಣ ಮಾಡಿ ಸೂಕ್ತ ರಾಜಕೀಯ ಸ್ಥಾನಮಾನ ನೀಡಬೇಕು ಹಾಗೂ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವನ್ನು ಮರುಸ್ಥಾಪಿಸಬೇಕು ಎಂದು ಹಾಸನ ಜಿಲ್ಲಾ ಅಲ್ಪಸಂಖ್ಯಾತ ಮುಸ್ಲಿಂ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಸಮೀರ್ ಅಹಮದ್ ಆಗ್ರಹಿಸಿದರಲ್ಲದೆ ಹೋರಾಟದ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಸಿಗಬೇಕಾಗಿತ್ತು. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಹಾಗೂ ಮೂರು ಬಾರಿ ಎಂಎಲ್‌ಸಿ ಆಗಿ ಸೇವೆ ಸಲ್ಲಿಸಿದ್ದ ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಅಬ್ದುಲ್ ಜಬ್ಬಾರ್ ಅವರು ಕರ್ನಾಟಕ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ಪ್ರಾಮಾಣಿಕತೆ, ಸರಳತೆ ಮತ್ತು ಪಕ್ಷನಿಷ್ಠೆಯಿಂದ ಜನಮನ ಗೆದ್ದಿದ್ದರು. ಇಂತಹ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಆರೋಪ, ಪ್ರತ್ಯಾರೋಪಗಳ ಮೂಲಕ ರಾಜೀನಾಮೆ ಪಡೆದು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಅನ್ಯಾಯ ಎಂದು ಅವರು ಹೇಳಿದರು. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಶೇ.೯೨ರಷ್ಟು ಮತದಾನ ಮಾಡಿದ್ದು, ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಸಾಮಾಜಿಕ ನ್ಯಾಯದ ನಿರೀಕ್ಷೆಯಿಂದ ಪಕ್ಷವನ್ನು ಬೆಂಬಲಿಸಿದೆ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ನಾಸೀರ್ ಅಹಮದ್ ಅವರನ್ನು ವಜಾಗೊಳಿಸಿರುವುದೂ ನ್ಯಾಯವಲ್ಲ. ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧವೂ ತಲೆದಂಡ ಮಾಡುವ ಸಂಚು ನಡೆಯುತ್ತಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಬರುತ್ತಿದ್ದು, ಅವರು ಪಕ್ಷ ವಿರೋಧಿ ಯಾವುದೇ ಕೆಲಸ ಮಾಡಿಲ್ಲ. ಆದರೂ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಶೇ.೩೦ಕ್ಕಿಂತ ಹೆಚ್ಚಿದ್ದು, ಅಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೇಳುವುದು ಸಹಜ. ಆದರೆ ಬಲಾಢ್ಯ ನಾಯಕರಿಗೆ ಒಂದು ನಿಯಮ, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ನಾಯಕರಿಗೆ ಬೇರೆ ನಿಯಮ ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.ಪಕ್ಷದೊಳಗಿನ ಶಿಸ್ತು ಎಂಬುದು ಆಯ್ಕೆಮಾಡಿದವರ ಮೇಲೆ ಮಾತ್ರ ಜಾರಿಯಾಗುತ್ತಿದೆ. ಹಿಂದೆ ಅನೇಕ ನಾಯಕರು ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ ಅಲ್ಪಸಂಖ್ಯಾತ ನಾಯಕರ ವಿಷಯದಲ್ಲಿ ಮಾತ್ರ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕ್ ಎಂದು ಭಾವಿಸಬಾರದು. ಈ ಸಮುದಾಯದಲ್ಲಿ ಈಗ ರಾಜಕೀಯ ಜಾಗೃತಿ ಮೂಡುತ್ತಿದ್ದು, ಸರಿ-ತಪ್ಪಿನ ಬಗ್ಗೆ ಪ್ರಶ್ನೆ ಮಾಡುವ ಶಕ್ತಿ ಬಂದಿದೆ. ಮುಸ್ಲಿಂ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅಬ್ದುಲ್ ಜಬ್ಬಾರ್ ಹಾಗೂ ನಾಸೀರ್ ಹುಸೇನ್ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವನ್ನು ಮರುಸ್ಥಾಪಿಸಿ, ಮುಂದೆಯೂ ಪಕ್ಷಕ್ಕಾಗಿ ದುಡಿಯುವ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಅಮೀರ್ ಜಾನ್, ಆಖಿಲ್ ಅಹಮದ್, ಅಕ್ಮಲ್ ಜಾವೇದ್, ಸುಲೈಮಾನ್ ಪಾಷಾ, ಸಯ್ಯದ್ ಅನ್ಸರ್ ಇತರರು ಉಪಸ್ಥಿತರಿದ್ದರು.