ಪ್ರಸ್ತುತ ಒಂದು ಲೀಟರ್‌ ಪೆಟ್ರೋಲ್ ಬೆಲೆ ₹೧೧೦.೫೭, ಡೀಸೆಲ್ ೯೮.೮೦, ೧೪ ಕೇಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ೯೬೮ ಹಾಗೂ ೧೯ ಕೇಜಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ ೩,೩೧೫ಕ್ಕೆ ಏರಿಕೆಯಾಗಿರುವುದರಿಂದ ಮಧ್ಯಮ ಹಾಗೂ ಬಡ ವರ್ಗದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಧನ ದರ ಹೆಚ್ಚಳವಾದಾಗ ಅದರ ಪರಿಣಾಮವಾಗಿ ಸಾರಿಗೆ ವೆಚ್ಚ ಹೆಚ್ಚಾಗಿ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತದೆ. ರೈತರು, ಕಾರ್ಮಿಕರು ಹಾಗೂ ಸಾಮಾನ್ಯ ಜನರ ಆದಾಯದಲ್ಲಿ ಯಾವುದೇ ಹೆಚ್ಚಳವಾಗದಿರುವಾಗ ಇಂತಹ ಬೆಲೆ ಏರಿಕೆ ಜೀವನ ನಿರ್ವಹಣೆಯನ್ನು ಕಷ್ಟಕರವಾಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಪಂಚ ರಾಜ್ಯಗಳ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ (ಗ್ಯಾಸ್) ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ಹಾಸನ ಜಿಲ್ಲಾ ಸಂಘಟನಾ ಸಮಿತಿ ನಗರದ ಎನ್.ಆರ್. ವೃತ್ತದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್. ಆರ್‌. ನವೀನ್ ಕುಮಾರ್‌ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಸಾಕಷ್ಟು ದಾಸ್ತಾನು ಇದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಇಂಧನ ಹಾಗೂ ಗ್ಯಾಸ್ ಬೆಲೆ ಹೆಚ್ಚಿಸಿ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಿದೆ ಎಂದು ಆರೋಪಿಸಿದರು. ಇದು ಜನವಿರೋಧಿ ಮತ್ತು ಜನದ್ರೋಹಿ ಕ್ರಮವಾಗಿದ್ದು, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸುತ್ತಿದೆ ಎಂದು ಟೀಕಿಸಿದರು.

ಪ್ರಸ್ತುತ ಒಂದು ಲೀಟರ್‌ ಪೆಟ್ರೋಲ್ ಬೆಲೆ ₹೧೧೦.೫೭, ಡೀಸೆಲ್ ೯೮.೮೦, ೧೪ ಕೇಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ೯೬೮ ಹಾಗೂ ೧೯ ಕೇಜಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ ೩,೩೧೫ಕ್ಕೆ ಏರಿಕೆಯಾಗಿರುವುದರಿಂದ ಮಧ್ಯಮ ಹಾಗೂ ಬಡ ವರ್ಗದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಧನ ದರ ಹೆಚ್ಚಳವಾದಾಗ ಅದರ ಪರಿಣಾಮವಾಗಿ ಸಾರಿಗೆ ವೆಚ್ಚ ಹೆಚ್ಚಾಗಿ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತದೆ. ರೈತರು, ಕಾರ್ಮಿಕರು ಹಾಗೂ ಸಾಮಾನ್ಯ ಜನರ ಆದಾಯದಲ್ಲಿ ಯಾವುದೇ ಹೆಚ್ಚಳವಾಗದಿರುವಾಗ ಇಂತಹ ಬೆಲೆ ಏರಿಕೆ ಜೀವನ ನಿರ್ವಹಣೆಯನ್ನು ಕಷ್ಟಕರವಾಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ-ಇಸ್ರೇಲ್ ದಾಳಿಗಳ ಪರಿಣಾಮ ಬಿಕ್ಕಟ್ಟು ಸೃಷ್ಟಿಯಾಗಿರುವ ಸಂದರ್ಭದಲ್ಲಿ ಭಾರತವು ಇತರ ರಾಷ್ಟ್ರಗಳೊಂದಿಗೆ ಸೇರಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾದ ಹಿಂಬಾಲಕ ನಾಯಕನಂತೆ ವರ್ತಿಸುತ್ತಿದ್ದು, ಇಸ್ರೇಲ್ ಪರ ನಿಲುವು ತಾಳುತ್ತಿದ್ದಾರೆ. ಇತರೆ ಅನೇಕ ರಾಷ್ಟ್ರಗಳು ತಮ್ಮ ನಾಗರಿಕರ ಹಿತದೃಷ್ಟಿಯಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿವೆ. ಆದರೆ ಭಾರತದಲ್ಲಿ ಜನಸಾಮಾನ್ಯರ ಮೇಲೆಯೇ ಬೆಲೆ ಏರಿಕೆಯ ಸಂಪೂರ್ಣ ಹೊರೆ ಹಾಕಲಾಗುತ್ತಿದೆ. ಜನಹಿತಕ್ಕಿಂತ ಚುನಾವಣಾ ರಾಜಕೀಯವೇ ಬಿಜೆಪಿಗೆ ಮುಖ್ಯವಾಗಿದೆ ಎಂದು ಟೀಕಿಸಿದರು.

ಮಿತವ್ಯಯದ ಬಗ್ಗೆ ಜನರಿಗೆ ಪಾಠ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದೆಡೆ ರೋಡ್ ಶೋ ಹಾಗೂ ವೈಮಾನಿಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುವುದು ಜನರ ಸಂಕಷ್ಟವನ್ನು ಕಡೆಗಣಿಸುವಂತಿದೆ ಎಂದು ಆರೋಪಿಸಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆಗಳನ್ನು ಕಡಿತಗೊಳಿಸಿ ಜನರಿಗೆ ಪರಿಹಾರ ಒದಗಿಸಬೇಕು. ಇಂಧನ ದರ ಏರಿಕೆಯ ಸಂಪೂರ್ಣ ಹೊರೆ ಜನರ ಮೇಲೆ ಹಾಕಬಾರದು ಹಾಗೂ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಸಿಪಿಐ(ಎಂ) ಹಾಸನ ಜಿಲ್ಲಾ ಸಂಘಟನಾ ಸಮಿತಿ ಒತ್ತಾಯಿಸಿತು.ಪ್ರತಿಭಟನೆಯಲ್ಲಿ ಸಿಪಿಐಎಂ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ ಸೇರಿದಂತೆ ಸಿಪಿಐ(ಎಂ) ಮುಖಂಡರಾದ ಧರ್ಮೇಶ್, ಎಚ್. ಎಸ್. ಮಂಜುನಾಥ್, ಅರವಿಂದ್ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.