ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಆರ್ಥಿಕ ಬರೆ ಎಳೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಕ್ರಮವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಡಿವೈಎಫ್ಐ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಭಾನುವಾರ ನಗರದ ಮೈಲಾರ ಮಹದೇವಪ್ಪ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು.
ಹಾವೇರಿ: ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಆರ್ಥಿಕ ಬರೆ ಎಳೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಕ್ರಮವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಡಿವೈಎಫ್ಐ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಭಾನುವಾರ ನಗರದ ಮೈಲಾರ ಮಹದೇವಪ್ಪ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು.
ಹಾಲಿನ ದರ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ತಕ್ಷಣವೇ ಈ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ರಾಷ್ಟ್ರೀಯ ಮುಖಂಡರಾದ ಬಸವರಾಜ ಪೂಜಾರ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಜನರ ಜೀವನಾಧಾರ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್, ಔಷಧಿ ಮತ್ತಿತರ ಅಗತ್ಯ ಸಾಮಗ್ರಿಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಡಿ.ಕೆ. ಶಿವಕುಮಾರ್ ಸರ್ಕಾರ ಸಹ ಬೆಲೆ ಏರಿಕೆಯ ಹೊರೆಯನ್ನು ಸಾರ್ವಜನಿಕರ ಮೇಲೆ ಹಾಕುತ್ತಿದೆ. ಇನ್ನೊಂದೆಡೆ ಕಾರ್ಪೊರೇಟ್ ಬಂಡವಾಳಗಾರರಿಗೆ ಪ್ರೋತ್ಸಾಹ ಧನ ಹಾಗೂ ವಿವಿಧ ರಿಯಾಯಿತಿಗಳನ್ನು ನೀಡುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಹಾಲು, ಹಾಲಿನ ಉತ್ಪನ್ನಗಳು, ಬಸ್ ದರ ಸೇರಿದಂತೆ ದಿನ ಬಳಕೆ ವಸ್ತುಗಳ ದರವನ್ನು ವಿಪರೀತವಾಗಿ ಏರಿಕೆ ಮಾಡಿದ್ದು ಖಂಡನೀಯ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಜನರಿಂದ ನೇರ ಲೂಟಿ ಮಾಡಲು ಹೊರಟಿದೆ. ಕೂಡಲೇ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಇಳಿಸಬೇಕು. ದರ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಡಿಎಸ್ಎಸ್ ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ, ಜನವಿರೋಧಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಖಂಡನೀಯ. ಜನರ ದುಡಿಮೆ ಮೇಲೆ ಹಾಗೂ ಆರ್ಥಿಕತೆಯ ಮೇಲೆ ಭಾರಿ ಪ್ರಮಾಣದಲ್ಲಿ ಪೆಟ್ಟು ಬೀಳುತ್ತದೆ ಎಂದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಚೈತ್ರಾ ಕೊರವರ ಮಾತನಾಡಿ, ಹೈನುಗಾರಿಕೆ ಮಾಡುವ ರೈತರ ಕಷ್ಟಕ್ಕೆ ಸಬ್ಸಿಡಿ ಹೆಚ್ಚಿಸಿ ನೆರವಾಗುವ ಬದಲು, ಹಾಲಿನ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರು ಮತ್ತು ಹಾಲು ಉತ್ಪಾದಕ ರೈತರ ಮಧ್ಯೆ ವೈರತ್ವ ತರುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ರೈತರಿಗೆ ವಾಸ್ತವವಾಗಿ ಹಾಲಿನ ಗುಣಮಟ್ಟಕ್ಕೆ ಅನುಗುಣವಾಗಿ 1 ಲೀಟರ್ಗೆ ಕೇವಲ 7 ರುಪಾಯಿ ಮಾತ್ರ ಸಿಗುತ್ತಿದೆ. ಆದರೆ, ರೈತರ ನೆಪ ಹೇಳಿ ವಿವಿಧ ಗುಣಮಟ್ಟದ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರುಪಾಯಿಯಿಂದ ಹಿಡಿದು 15 ರುಪಾಯಿಯವರೆಗೆ ಭಾರಿ ಹೆಚ್ಚಳ ಮಾಡಲಾಗಿದೆ ಎಂದರು.ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ ಕುಮಾರ ನಗವತ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹಾರ, ಎಸ್ಎಫ್ಐ- ಡಿವೈಎಫ್ಐ ಮುಖಂಡರಾದ ಶಂಭುಲಿಂಗ ಸವದತ್ತಿ, ಪರಶುರಾಮ ಎಸ್., ಧನುಷ್ ದೊಡ್ಡಮನಿ, ಅನ್ವಿಕಾ ಆರ್.ಬಿ., ಸ್ವಪ್ನ ಕಬ್ಬೆರ್, ರೇಣುಕಾ ಓಲೇಕಾರ, ಅನುಶ್ರೀ ಕಮದೋಳ್ಳಿ, ವನಜಾಶ್ರಿ ಕೋಟೆರ್, ಕುಮಾರ ಹಡಪದ್, ಮಹಮದ್ ಯಾಸಿನ್, ಅಯಾನ್, ಪಕ್ಕೀರೇಶ ಎನ್., ಮುಕಬಲ್ ಅಹಮದ್, ಅತ್ತವುಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.