ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಅಳವಡಿಕೆಗೆ ಖಂಡನೆ

| Published : Sep 10 2024, 01:34 AM IST

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಅಳವಡಿಕೆಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಬೆಸ್ಕಾಂನವರು ಕೃಷಿ ಪಂಪ್ ಸೆಟ್ಟಿಗೆ ಆಧಾರ್ ಲಿಂಕ್ ಅಳವಡಿಕೆ ಮಾಡುವುದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಬೃಹತ್ ಬೈಕ್ ಜಾಥಾ ಬಳಿಕ ಪ್ರತಿಭಟನೆ ನಡೆಸಿದರು.

ಮಾಗಡಿ: ಬೆಸ್ಕಾಂನವರು ಕೃಷಿ ಪಂಪ್ ಸೆಟ್ಟಿಗೆ ಆಧಾರ್ ಲಿಂಕ್ ಅಳವಡಿಕೆ ಮಾಡುವುದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಬೃಹತ್ ಬೈಕ್ ಜಾಥಾ ಬಳಿಕ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಮರೂರು ಹ್ಯಾಂಡ್ ಪೋಸ್ಟ್‌ನಿಂದ ಮಾಗಡಿ ಬೆಸ್ಕಾಂ ಕಚೇರಿವರೆಗೂ ಬೃಹತ್ ಬೈಕ್ ಜಾಥಾ ಹಾಗೂ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಗೋವಿಂದರಾಜು, ಬೆಸ್ಕಾಂ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡಿಸುವುದರಿಂದ ರೈತರು ಕೂಡ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್‌ ಕಟ್ಟುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ರೈತರು ವಿದ್ಯುತ್ ಬಿಲ್ ಕಟ್ಟಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತಾ? ರೈತರಿಗೆ ಈ ರೀತಿ ತೊಂದರೆ ಕೊಟ್ಟರೆ ಅವರು ಬದುಕುವುದಾದರೂ ಹೇಗೆ? ಬೆಳೆ ನಷ್ಟವಾದಾಗ ಸರ್ಕಾರ ರೈತರ ಬೆಳೆಯನ್ನು ಇದೇ ರೀತಿ ಅಂದಾಜು ಮಾಡುತ್ತಾರಾ? ಸರಿಯಾಗಿ ರೈತರಿಗೆ ಕೊಡಬೇಕಾದ ವಿದ್ಯುತ್‌ ಮಾತ್ರ ಕೊಡುವುದಿಲ್ಲ. ಕೃಷಿಯನ್ನು ನಂಬಿರುವ ರೈತ ಕುಟುಂಬ ಜೀವನ ನಡೆಸುವುದಾದರೂ ಹೇಗೆ? ಹಿಂದೆ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಾಗ ರೈತರಲ್ಲೆರು ಉಗ್ರ ಪ್ರತಿಭಟನೆ ಮಾಡಿದ ಪರಿಣಾಮ ವಿದ್ಯುತ್ ಕಂಪನಿ ಐದು ಭಾಗಗಳಾಗಿ ಸರ್ಕಾರದಲ್ಲೇ ಉಳಿದಿದೆ. ಈಗ ಆಧಾರ್ ಲಿಂಕ್ ಮಾಡುವ ಮೂಲಕ ಖಾಸಗೀಕರಣ ಮಾಡಲು ಹುನ್ನಾರ ಮಾಡುತ್ತಿದ್ದಾರೆ ಎಂದು ರೈತ ಸಂಘ ಆರೋಪಿಸಿತು.

ಜಿಲ್ಲಾಧ್ಯಕ್ಷ ಎ.ಎಲ್. ಬೈರೇಗೌಡ ಮಾತನಾಡಿ, ಇಂಧನ ಸಚಿವರಾಗಿ ಕೆಜೆ ಜಾರ್ಜ್ ಅವರು ಸರಿಯಾಗಿ ತಮ್ಮ ಖಾತೆಯನ್ನು ನಿಭಾಯಿಸಲಾಗುತ್ತಿಲ್ಲ ಮುಖ್ಯಮಂತ್ರಿಗಳು ಅವರನ್ನು ವಿದ್ಯುತ್‌ ಖಾತೆಯಿಂದ ಬದಲಾಯಿಸಬೇಕು. ಈ ಮುಂಚೆ ಇಬ್ಬರು ರೈತರು ಸೇರಿ ಒಂದು ಟಿಸಿ ಹಾಕಲು 25ರಿಂದ 30 ಸಾವಿರ ಹಣದಲ್ಲಿ ಹೊಸ ಟಿಸಿ ಹಾಕುತ್ತಿದ್ದರು. ಆದರೆ 2023ರಿಂದ ಇಲ್ಲಿಯವರೆಗೂ 30 ಸಾವಿರ ಹಣ ಕಟ್ಟಿರುವ ರೈತರಿಗೆ ಉಚಿತ ಟಿಸಿ ಹಾಕಲು ಬೆಸ್ಕಾಂ ನಿರ್ಲಕ್ಷ ಮಾಡುತ್ತಿದೆ. ಹಲವಾರು ರೈತರಿಂದ ಹಣ ಕಟ್ಟಿಸಿಕೊಂಡು ಹಲವು ವರ್ಷಗಳು ಕಳೆದರೂ ರೈತರಿಗೆ ಟಿಸಿ ಹಾಕುತ್ತಿಲ್ಲ. ಕೂಡಲೇ ಇಬ್ಬರು ರೈತರಿಗೆ ಒಂದು ಟಿಸಿ ಅಕ್ರಮ ಸಕ್ರಮದಡಿ ಹಣ ಕಟ್ಟಿಸಿಕೊಂಡಿರುವ ರೈತರಿಗೆ ಟಿಸಿ ಹಾಕಬೇಕು. ರೈತರಿಗೆ ಕೊಡಬೇಕಾದ ವಿದ್ಯುತ್‌ ಸರಿಯಾಗಿ ನೀಡಬೇಕು. ಇಲ್ಲವಾದರೆ ಬೆಸ್ಕಾಂ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೆಸ್ಕಾಂ ಎಇ ನಟರಾಜ್ ಮಾತನಾಡಿ, ಅಕ್ರಮ ಸಕ್ರಮದಡಿ ತಾಲೂಕಿನಲ್ಲಿ 1715 ರೈತರು ಹಣ ಕಟ್ಟಿದ್ದು 650 ರೈತರಿಗೆ ಟಿಸಿ ಅಳವಡಿಸಲಾಗಿದೆ. ಮಾಗಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಎರಡು ತಿಂಗಳಲ್ಲಿ ಟಿಸಿ ಅಳವಡಿಕೆ ಕಾರ್ಯ ಮುಗಿಸಲಿದ್ದು ಕುದೂರು ಉಪವಿಭಾಗದಲ್ಲಿ ಡಿಸೆಂಬರ್ ನಲ್ಲಿ ಪೂರ್ಣಗೊಳಿಸುತ್ತೇವೆ. ಟಿಸಿ ರಿಪೇರಿಗೆ ಬಂದಾಗ ರೈತರು ಯಾರಿಗೂ ಹಣ ಕೊಡಬೇಕಾಗಿಲ್ಲ. ಯಾರಾದರೂ ಹಣ ಕೇಳಿದರೆ ನನಗೆ ದೂರು ನೀಡಿ ರೈತರು ಕೊಟ್ಟಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕೊಡಿಸುತ್ತೇವೆ. ಹೊಸದಾಗಿ ಟಿಸಿ ಅಳವಡಿಸಿಕೊಳ್ಳಲು 2 ಲಕ್ಷ ಹಣ ಕಟ್ಟಿದರೆ ಅವರಿಗೆ ಟಿಸಿ ಅಳವಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಭಗಿನಗೆರೆ ಸ್ವಾಮಿ, ವಿದ್ಯಾರ್ಥಿ ಮಿತ್ರ ರವಿಕಿರಣ್, ಕುದುರೆ ಹೋಬಳಿ ಅಧ್ಯಕ್ಷ ಮಂಜುನಾಥ್, ತಾಳೆಕೆರೆ ಬೆಟ್ಟೇಗೌಡ, ಐಯಂಡಹಳ್ಳಿ ಗಿರೀಶ್, ಮರೂರು ಕೃಷ್ಣಪ್ಪ, ನೇರಳೆಕೆರೆ ಶ್ರೀನಿವಾಸ್, ಬೆಟ್ಟಹಳ್ಳಿ ಚಂದ್ರಣ್ಣ, ಮಾಗಡಿ ಕುಮಾರ್, ಲಂಕಪ್ಪ, ಅಸ್ರಫ್, ತಗೀಕುಪ್ಪೆ ನಾರಾಯಣಪ್ಪ, ಅಣ್ಣಯ್ಯ, ದೊಡ್ಡಮುದ್ದಿಗೆರೆ ಕೃಷ್ಣಪ್ಪ, ಮಾಯನಾಯಕನಹಳ್ಳಿ ಮಾರೇಗೌಡ ಇತರರು ಪಾಲ್ಗೊಂಡಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯಲ್ಲಿ ಕೃಷಿ ಪಂಪ್ ಸೆಟ್ಟಿಗೆ ಆಧಾರ್ ಲಿಂಕ್ ಅಳವಡಿಕೆ ಮಾಡುವುದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಬೈಕ್ ಜಾಥಾ ಬಳಿಕ ಪ್ರತಿಭಟನೆ ನಡೆಸಿದರು.