ಹೊಸಪೇಟೆ: ಮೈಸೂರ ದಸರಾ ಉತ್ಸವದ ಜಂಬೂ ಸವಾರಿ ಉದ್ಘಾಟನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಲಿತ ಸಚಿವರನ್ನು ತಡೆದು ಅವಮಾನಿಸಲಾಗಿದೆ.ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್‌ ಕಚೇರಿ ಎದುರು ಸಮಾನತೆ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಮಾನತೆ ವೇದಿಕೆ ಸಂಚಾಲಕ ಎನ್‌.ವೆಂಕಟೇಶ ಮಾತನಾಡಿ, ವಿಶ್ವವಿಖ್ಯಾತ ಮೈಸೂರ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಉದ್ಘಾಟನೆಗೆ ಸಿಎಂ ಡಿ.ಕೆ. ಶಿವಕುಮಾರ ಅವರೊಂದಿಗೆ ತೆರಳುತ್ತಿದ್ದ ಸಚಿವರಾದ ಶಿವರಾಜ ತಂಗಡಗಿ, ಕೆ.ಎಸ್‌. ಬಸವಂತಪ್ಪ, ನರೇಂದ್ರಸ್ವಾಮಿ ಅವರನ್ನು ಐಪಿಎಸ್‌ ಅಧಿಕಾರಿ ತಡೆಯುವ ಮೂಲಕ ದಲಿತ ಸಚಿವರನ್ನು ಅವಮಾನಿಸಿದ್ದಾರೆ.ಈ ಘಟನೆಯನ್ನು ಸಮಾನತೆ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದರು.ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಒಳಗೆ ಬಿಡಲಾಗಿದೆ. ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆಯೊ ಅಥವಾ ಆಕಸ್ಮಿಕ ಘಟನೆಯೊ ಎಂಬುದನ್ನು ಸಿಎಂ ಸ್ಪಷ್ಟ ಪಡಿಸಬೇಕು. ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ ಎಂದರು.

ಒಂದು ವೇಳೆ ಸಚಿವರನ್ನು ಅವರ ಜಾತಿಯ ಆಧಾರದ ಮೇಲೆ ತಡೆದು ಅವಮಾನಿಸಿರುವುದು ಸಾಬೀತಾದಲ್ಲಿ ಅದು ಸಂವಿಧಾನವು ಪ್ರತಿಪಾದಿಸುವ ಸಮಾನತೆ, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾದ ಗಂಭೀರ ಕೃತ್ಯವಾಗುತ್ತದೆ ಎಂದು ಹೇಳಿದರು.

ಘಟನೆ ಕುರಿತಂತೆ ಮುಖ್ಯಮಂತ್ರಿಗಳು ದಲಿತರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹಂಪಿ ಉತ್ಸವಕ್ಕೆ ಆಗಮಿಸುವ ಸಿಎಂಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಸಮಾನತೆ ವೇದಿಕೆ ಸಂಚಾಲಕ ಭರತ್ ಕುಮಾರ್ ಸಿ.ಆರ್ ಮಾತನಾಡಿ, ಘಟನೆ ನಡೆದ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸ್ಥಳದಲ್ಲಿಯೇ ಇದ್ದರು. ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಖಂಡನೀಯ.ಈ ಹಿನ್ನೆಲೆ ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ದಲಿತ ಸಚಿವರನ್ನು ತಡೆದು ಅವಮಾನಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಧಿಕಾರಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.


ಸಮಾನತೆ ವೇದಿಕೆ ಮುಖಂಡರಾದ ಎಚ್.ಶೇಷು, ವೈ. ರಾಮಚಂದ್ರ ಬಾಬು, ಗೋವಿಂದರಾಜ್, ಮಾಜಿ ನಗರಸಭಾ ಸದಸ್ಯ ರಾಜು, ಕರಿಯಪ್ಪ, ಜೆ.ಬಿ. ರಾಘವೇಂದ್ರ, ಕೊಲ್ಲಾಪುರಿ, ಹನುಮಂತ, ಉಮೇಶ್, ಶೇಕ್ ಮೆಹಬೂಬ್ ಬಾಷಾ, ಓಬಳೇಶ್, ಇಂತಿಯಾಜ್, ತಾಜುದ್ದೀನ್, ಅಲೆನ್ ಸುಹೇಲ್ ಎರಿಸ್ವಾಮಿ, ಈ. ಅನಿಲ್, ತಾಯಣ್ಣ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.