ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆಗೆ ಖಂಡನೆ

| Published : Feb 25 2024, 01:48 AM IST

ಸಾರಾಂಶ

ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಪ.ಜಾ ಮತ್ತು ಪ.ವರ್ಗದ ಗೃಹ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ಹಂಚುತ್ತಿದ್ದರೆ, ರಾಜ್ಯ ಸರ್ಕಾರದ ಯೋಜನೆಗಳು ಕೋಮಾ ಸ್ಥಿತಿಗೆ ತಲುಪಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇವಲ ಮಾತಿನಲ್ಲಿ ಮಾತ್ರ ಕಾಳಜಿ ತೋರುವ ಮೂಲಕ ಕಾಂಗ್ರೆಸ್‌ ಸರ್ಕಾರ ದಲಿತ ಸಮುದಾಯವನ್ನು ವಂಚಿಸುತ್ತಿದೆ. ದಲಿತರಿಗೆ ಮೀಸಲಿಟ್ಟ ಅನುದಾನ ಬೇರೆ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಚುನಾವಣೆ ಗೆಲುವಿಗಾಗಿ ಘೋಷಿಸಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಾಗಿ ದಲಿತರಿಗೆ ಮೀಸಲಿಟ್ಟಿದ್ದ ₹11,144 ಕೋಟಿ ಬಳಕೆ ಮಾಡುವ ಮೂಲಕ ದಲಿತರಿಗೆ ದ್ರೋಹ ಮಾಡಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಇವರ ಡೋಂಗಿ ದಲಿತ ಕಾಳಜಿ ಬಯಲು ಮಾಡಿದ್ದಾರೆ. ದಲಿತರ ಹಿತರಕ್ಷಣೆ ಮಾಡಬೇಕಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪನವರು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಪಕ್ಷಕ್ಕಾಗಿ ದಲಿತ ಸಮುದಾಯದ ಹಿತವನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾರಿಗೆ ₹10,000 ಕೋಟಿ ಹಣ ವೆಚ್ಚ ಮಾಡಲು ಮಾತ್ರ ಯಾವ ಗ್ಯಾರಂಟಿಯೂ ಅಡ್ಡಿಯಾಗಿಲ್ಲ. ಇವರಿಗೆ ದಲಿತರ ಹಿತಾಸಕ್ತಿಗಿಂತ ವೋಟು ಬ್ಯಾಂಕ್ ರಾಜಕಾರಣ ಆದ್ಯತೆಯಾಗಿರುವುದು ಶೋಚನೀಯ ಸಂಗತಿ. ಮೊರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣ ಇವರ ಯೋಜನೆಗಳಿಗೆ ಬಳಸಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಇದಲ್ಲದೆ ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣವು ದುರ್ಬಳಕೆಯಾಗಿ ಉನ್ನತ ಶಿಕ್ಷಣದಿಂದ ದಲಿತ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿಸುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸಲುವಾಗಿ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಪ.ಜಾ ಮತ್ತು ಪ.ವರ್ಗದ ಗೃಹ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ಹಂಚುತ್ತಿದ್ದರೆ, ರಾಜ್ಯ ಸರ್ಕಾರದ ಯೋಜನೆಗಳು ಕೋಮಾ ಸ್ಥಿತಿಗೆ ತಲುಪಿವೆ. ರೈತ ನಿಧಿ ಯೋಜನೆಯಲ್ಲಿ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವು ಸ್ಥಗಿತಗೊಂಡಿದೆ. ಹಾಗೂ ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ₹4 ಸಾವಿರಕ್ಕೂ ಕತ್ತರಿ ಪ್ರಯೋಗವಾಗಿದೆ. ಸಿದ್ದರಾಮಯ್ಯನವರು ಬಾಯಿ ತೆಗೆದರೆ ದಲಿತ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ಮಾತನಾಡುವುದಕ್ಕೆ ಮಾತ್ರ ಅವರ ಹಿತಶಕ್ತಿ ಸಿಮೀತಗೊಳಿಸಿದ್ದಾರೆ ಎಂದರು.

ಪ.ಜಾತಿ ಮತ್ತು ಪಂಗಡದವರಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆಸಕ್ತಿಯಿಲ್ಲದಂತಾಗಿದೆ. ರಸ್ತೆ ಬದಿಯ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಸ್ವ-ನಿಧಿ ಯೋಜನೆಗೆ ರಾಜ್ಯ ಸರ್ಕಾರವು ದಲಿತ ಉದ್ಯಮಿಗಳಿಗೆ ಪ್ರೋತ್ಸಾಹ ಧನವಾಗಿ ಬಡ್ಡಿಯಲ್ಲಿ ಪಾಲು ಕೊಡಬಹುದಿತ್ತು. ಆದರೆ, ಅದರ ಕಡೆ ಗಮನ ಹರಿಸಿಲ್ಲ. ಗ್ಯಾರಂಟಿಗೆ ಹಣ ನೀಡಬೇಕಾದ ಕಾರಣ 2024-25 ಮುಂಗಡ ಪತ್ರದಲ್ಲಿ ಮತ್ತೆ ಹನ್ನೊಂದು ಸಾವಿರ ಕೋಟಿ ಅನುದಾನ ಕಡಿತವಾಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದಲಿತರಿಗೆ ಸೇರಬೇಕಾದ ಅನುದಾನ ನಿರಾಕರಿಸಿ ಅನ್ಯಾಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ದಲಿತರಿಗೆ ಅನ್ಯಾಯ ಮಾಡದಂತೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಈರಯ್ಯಾ ಖೋತ, ರಾಜಶೇಖರ ಡೋನಿ, ಮಂಜುನಾಥ ಪಮ್ಮಾರ, ಯಲ್ಲೇಶ ಕೋಲಕಾರ, ಮುರಘೇಂದ್ರಗೌಡ ಪಾಟೀಲ, ರಾಜೇಂದ್ರ ಹರಕುಣಿ, ಗಿರೀಶ ದೊಂಗಡಿ, ವಿ.ಬಿ.ಪೂಜಾರ ಸೇರಿದಂತೆ ಮೊದಲಾದವರು ಇದ್ದರು.