ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಖಂಡನೆ

| Published : Jun 17 2024, 01:31 AM IST

ಸಾರಾಂಶ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಬಡವರ ಬದುಕಿನ ಮೇಲೆ ಬರೆ ಎಳೆದಂತಾಗಿದ್ದು, ತಕ್ಷಣ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡಿರುವುದು ಬಡವರ ಬದುಕಿನ ಮೇಲೆ ಬರೆ ಎಳೆದಂತಾಗಿದ್ದು, ತಕ್ಷಣ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ್ ಕುಚಬಾಳ ಆಗ್ರಹಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಾಯಕರ ನೇತೃತ್ವದಲ್ಲಿ ಜೂನ್‌.17ರಂದು ಬೆಳಗ್ಗೆ 11ಕ್ಕೆ ನಗರದ ಮಹಾತ್ಮಾ ಗಾಂಧಿ ಚೌಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮಾಡಲಾಗುವುದು. ಕಾಂಗ್ರೆಸ್ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರ ದಿಢೀರ್‌ನೇ ಡೀಸೆಲ್‌ ಬೆಲೆ ₹3.50 ಹಾಗೂ ಪೆಟ್ರೋಲ್ ₹3 ಬೆಲೆ ಏರಿಕೆ ಮಾಡಿದೆ. ಇದು ಸರಕು ಸಾಗಾಣಿಕೆ, ದಿನ ಬಳಿಕೆ ಎಲ್ಲ ಪದಾರ್ಥಗಳ‌ ಬೆಲೆ ಹೆಚ್ಚಾಗಲು ಕಾರಣವಾಗಲಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಜೀವನ ಮಾಡುವುದು ಕಷ್ಟ ಎಂಬ ಸ್ಥಿತಿಗೆ ರಾಜ್ಯ ಸರ್ಕಾರ ತಂದಿದೆ ಎಂದರು.

ಗ್ಯಾರಂಟಿಗಳಲ್ಲೂ ಮೋಸ:

ರಾಜ್ಯ ಸರ್ಕಾರ ಈಗಾಗಲೇ ನೀಡಿರುವ ಗ್ಯಾರಂಟಿಗಳಲ್ಲಿ ಮೋಸ ಮಾಡಲಾಗಿದೆ. ಬಸ್‌ನಲ್ಲಿ, ಕರೆಂಟ್‌ನಲ್ಲೂ ಮೋಸ ಮಾಡಿದ್ದಾರೆ. ಒಂದು ಉತಾರಿ ಪಡೆಯಲು ದುಪ್ಪಟ್ಟು ಹಣ ಕೊಡಬೇಕಾದ ಸ್ಥಿತಿ ಬಂದಿದೆ. ತಕ್ಷಣ ದರ ಏರಿಕೆ ಹಿಂಪಡೆಯಬೇಕು. ಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೊಲೆ, ಸುಲಿಗೆ ಹೆಚ್ಚಾಗಿವೆ. ಬರಗಾಲದಲ್ಲೂ ರೈತರ ನೆರವಿಗೆ ಬರಲಿಲ್ಲ. ಕೇಂದ್ರ ಸರಕಾರ ರೈತರಿಗೆ ₹17500 ಬರ ಪರಿಹಾರ ಕೊಟ್ಟರೆ, ನಾವು ಮೊದಲೇ 2 ಸಾವಿರ ಕೊಟ್ಟಿದ್ದೀವಿ ಎಂದು ರೈತರಿಗೆ ಕೇವಲ ₹15 ಸಾವಿರ ಕೊಟ್ಟಿದ್ದೀರಿ.‌ ಅಭಿವೃದ್ಧಿಗೆ ಹಣ ಇಲ್ಲ ಎಂದು ನಿಮ್ಮದೇ ಪಕ್ಷದ ಶಾಸಕರು ನಿಮ್ಮ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ನಾವು ಶಾಸಕ ಸ್ಥಾನವನ್ನೇ ತ್ಯಜಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ ಎಂದರು.

ನಿಗಮ‌ ಮಂಡಳಿ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ್ ಮಾತನಾಡಿ, 82 ವರ್ಷದ ಯಡಿಯೂರಪ್ಪನವರ ಮೇಲೆ ಕಾಂಗ್ರೆಸ್‌ನವರು ಈ ರೀತಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಯಸ್ಸಿಗಾದರೂ ಮರ್ಯಾದೆ ಕೊಡಬೇಕಿತ್ತು. ಯಡಿಯೂರಪ್ಪ ಅವರ ವಿಚಾರದಲ್ಲಿ ಕಾಂಗ್ರೆಸ್ ನಡೆಗೆ ಅವರ ಪಕ್ಷದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.

ಕಳೆದ 16 ತಿಂಗಳಿನಲ್ಲಿ ರಾಜ್ಯ ಸರ್ಕಾರ ಒಂದೂ ಭೂಮಿ ಪೂಜೆ ಮಾಡಿಲ್ಲ. ಅಭಿವೃದ್ಧಿ ಕೆಲಸ ಮಾಡಿಲ್ಲ. ಇನ್ನು ಲೋಕಸಭೆಯಲ್ಲಿ ಮತಕ್ಷೇತ್ರವಾರು ಬಿಜೆಪಿಗೆ ಬಂದಿರುವ ಮತಗಳ ಕುರಿತು ಮಾತನಾಡಿ, ಸೋಲು ಗೆಲುವಿನ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ನಿಯತ್ತಿನಿಂದ ಕೆಲಸ ಮಾಡುತ್ತಾರೆ. ಕಾಂಗ್ರೆಸ್‌ನವರಿಗೆ ಯಾವುದೇ ಬದ್ಧತೆ ಇಲ್ಲ, ಅವರು ಹೇಗೆ ಚುನಾಯಿತರಾಗಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ, ಈರಣ್ಣ ರಾವೂರ, ಸಾಬು ಮಾಶ್ಯಾಳ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತತರಿದ್ದರು.

---

ಬಾಕ್ಸ್‌

ಯಡಿಯೂರಪ್ಪ ಟಾರ್ಗೆಟ್

ಇನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಿ ಟಾರ್ಗೆಟ್ ಮಾಡಲು ಹೊರಟಿದ್ದ ರಾಜ್ಯ ಸರ್ಕಾರದ ನಡೆಯನ್ನು ಸಚಿವ ಎಂ.ಬಿ.ಪಾಟೀಲ್ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಪ್ರತಿಯೊಂದನ್ನೂ ಸಮರ್ಥನೆ ಮಾಡಿಕೊಳ್ತಾರೆ. ಬಿಎಸ್‌ವೈ ಪ್ರಕರಣದಲ್ಲಿ ಮೂರು ತಿಂಗಳು ಸುಮ್ಮನಿದ್ದು ಈಗ ವಾರೆಂಟ್ ಹೊರಡಿಸಿದ್ದೀರಿ. ಇದರ ಬಗ್ಗೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪನವರು ದ್ವೇಷ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ. ಎಂ.ಬಿ.ಪಾಟೀಲ್ ಅವರು ಎಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರು ವಿಚಾರಣೆ ಹೋದಾಗ ವಾಪಸ್ಸು ಕಳಿಸಿದರು. ಮೂರು ತಿಂಗಳು ಇಲ್ಲಿಯೇ ಇದ್ದರು. ಆವಾಗ ಸುಮ್ಮನಿದ್ದು, ಈಗ ಹೀಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ್ ಕುಚಬಾಳ ಹೇಳಿದರು.