ರಾಜ್ಯದ ರೈತರಿಗೆ ದರ ನೀಡುವಲ್ಲಿ ನಾವು ನಷ್ಟದಲ್ಲಿದ್ದೇವೆ ಎನ್ನುವ ಸಕ್ಕರೆ ಕಾರ್ಖಾನೆ ಮಾಲೀಕರು ಪುನಃ 39 ಹೊಸ ಕಾರ್ಖಾನೆಗಳನ್ನು ತೆರೆಯಲು ಅನುಮತಿ ಪತ್ರ ಹಾಕಿದ್ದಾರೆ. ಜೊತೆಗೆ ಹೆಲಿಕಾಪ್ಟರ್‌ನಲ್ಲೇ ತಮ್ಮ ಓಡಾಟ ನಡೆಸಿ ಐಷಾರಾಮಿ ಜೀವನ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬೆಳಗಾವಿಯಲ್ಲಿ ಕಬ್ಬು ಬೆಳೆ ಹೋರಾಟಗಾರರ ಮೇಲೆ ಪೊಲೀಸರಿಂದ ನಡೆಯುತ್ತಿರುವ ದೌರ್ಜನ್ಯ ಮತ್ತು ಬಂಧನ ಕ್ರಮ ನಿಲ್ಲಿಸಿ ಪ್ರತಿ ಟನ್ ಕಬ್ಬುಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 1 ಸಾವಿರ ಪ್ರೋತ್ಸಾಹ ಧನದೊಂದಿಗೆ ಒಟ್ಟು 5500 ರು. ನಿಗದಿಗೊಳಿಸುವಂತೆ ಒತ್ತಾಯಿಸಿ ರೈತರು, ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಹಿರಿಯ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಸಮಿತಿ ಕಾರ್ಯಕರ್ತರು ಕೆಲಕಾಲ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯದ ರೈತರಿಗೆ ದರ ನೀಡುವಲ್ಲಿ ನಾವು ನಷ್ಟದಲ್ಲಿದ್ದೇವೆ ಎನ್ನುವ ಸಕ್ಕರೆ ಕಾರ್ಖಾನೆ ಮಾಲೀಕರು ಪುನಃ 39 ಹೊಸ ಕಾರ್ಖಾನೆಗಳನ್ನು ತೆರೆಯಲು ಅನುಮತಿ ಪತ್ರ ಹಾಕಿದ್ದಾರೆ. ಜೊತೆಗೆ ಹೆಲಿಕಾಪ್ಟರ್‌ನಲ್ಲೇ ತಮ್ಮ ಓಡಾಟ ನಡೆಸಿ ಐಷಾರಾಮಿ ಜೀವನ ನಡೆಸಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಂದ ಸುಮಾರು 60 ಸಾವಿರ ಕೋಟಿ ಆದಾಯಗಳಿಸಿ ಬೊಕ್ಕಸ ತುಂಬಿಸಿಕೊಂಡು ಕಬ್ಬು ಬೆಳೆಯುವ ರೈತರಿಗೆ 5 ಸಾವಿರ ಕೋಟಿಯಲ್ಲಿ ತಲಾ 1 ಸಾವಿರ ಪ್ರೋತ್ಸಾಹ ಧನ ನೀಡಲು ಇಲ್ಲದ ನೆಪ ಹೇಳಿ ವಂಚಿಸುತ್ತಿದೆ. ಈ ಹಿಂದೆ ಪ್ರಹ್ಲಾದ್ ಜೋಶಿಯವರೊಂದಿಗೆ ದೆಹಲಿಯಲ್ಲಿ ಕರೆಯಲಾಗಿದ್ದ ಕಬ್ಬು ಬೆಳೆ ಸಂಬಂಧಿತ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ತುಟಿ ಬಿಚ್ಚಿ ಒಂದೂ ಮಾತು ಆಡದೇ ಮೌನವಾಗಿ ಕುಳಿತು ವಾಪಸ್‌ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಬೆಳಗಾವಿಗೆ ಹೋಗಿ ರೈತರ ಮನವಿ ಆಲಿಸುವ ನಾಟಕವಾಗಿದ್ದ ಸಿಎಂ ಡಿ.ಕೆ.ಶಿವಕುಮಾರ್ ಜವಾಬ್ದಾರಿಯುತ ಸ್ಥಾನದ ಘನತೆ ಮರೆತು ನನ್ನ ಜೋಬಿನಿಂದ ಕೊಡಲೇ ಎಂದು ಆರ್ಥಿಕ ಜ್ಞಾನವಿಲ್ಲದ ವ್ಯಂಗ್ಯ ಉತ್ತರ ನೀಡಿ ತನ್ನ ಅವಿವೇಕದ ದುರಾಡಳಿತ ಹಾಗೂ ಸರ್ಕಾರದ ದಿವಾಳಿತನ ತೋರ್ಪಡಿಸಿದ್ದಾರೆ ಎಂದು ಕಿಡಿಕಾರಿದರು.

ಈ ಬಗ್ಗೆ ಧನಿ ಎತ್ತಿ ಉತ್ತರ ಕರ್ನಾಟಕ ಕಬ್ಬು ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆ ಪ್ರಾಮಾಣಿಕವಾಗಿದೆ. ಈ ಹೋರಾಟಗಾರರನ್ನು ಪೊಲೀಸರ ಮೂಲಕ ಬಂಧಿಸಿ ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದರು.

ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಕಬ್ಬು ಬೆಳೆಗಾರರಿಗೆ ತಾರತಮ್ಯದ ಬೆಲೆ ನಿಗದಿಪಡಿಸಿ ಹಿಂದಿನಿಂದಲೂ ವಂಚಿಸಲಾಗುತ್ತಿದೆ. ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಗೊಳಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಕಡಗೂಲಿ ಧನ ಕಳೆದು 3600 ಜತೆಗೆ ಪ್ರೋತ್ಸಾಹ ಧನ ಸೇರಿ ಒಟ್ಟು 5500 ರು. ನೀಡಿ ಕಬ್ಬು ಬೆಳೆಗಾರರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಉಪಾಧ್ಯಕ್ಷ ಗಂಜಾಂ ಮರೀಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಮುಖಂಡರಾದ ಅಚ್ಚಪ್ಪನಕೊಪ್ಪಲು ರವಿಕಲ್ಷ್ಮಣ, ಕಪರನಕೊಪ್ಪಲು ಸುರೇಶ್, ನೆಲಮನೆ ಶಿವನಂಜೇಗೌಡ, ಕಡತನಾಳು ಚಾಮರಾಜು, ಚಿಂದಗಿರಿಕೊಪ್ಪಲು ರಾಮಚಂದ್ರು, ಕೂಡಲಕುಪ್ಪೆ ಸ್ವಾಮಿಗೌಡ, ಕೆ.ಶೆಟ್ಟಹಳ್ಳಿ ಮಹಾಲಿಂಗು, ಶಂಕರ್ ಮಾರಸಿಂಗನಹಳ್ಳಿ ತಿಮ್ಮೇಗೌಡ, ಪಾಲಹಳ್ಳಿ ರಾಮಚಂದ್ರು, ಚಂದಗಾಲು ಪುರುಷೋತ್ತಮ್, ರಾಮಕೃಷ್ಣ, ಮೇಳಾಪುರ ಬಾಲು ದೇವರಾಜು ಇತರರು ಇದ್ದರು.