ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಮೀಸಲಾತಿ ರದ್ದುಪಡಿಸುತ್ತೇವೆಂದು ರಾಹುಲ್‌ಗಾಂಧಿ ವಿದೇಶದಲ್ಲಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ಸುರೇಶ್‌ಸಿದ್ದಾಪುರ, ರಾಹುಲ್ ಗಾಂಧಿ ಹೇಳಿಕೆ ನೀಡಿ ಶೋಷಿತ ಸಮುದಾಯದವರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಭವಿಷ್ಯದಲ್ಲಿ ಮೀಸಲಾತಿ ತೆಗೆಯುತ್ತೇವೆಂದು ಅಮೇರಿಕಾದಲ್ಲಿ ಹೇಳಿರುವುದನ್ನು ನೋಡಿದರೆ ದಲಿತರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆನ್ನುವುದು ಖಚಿತವಾಯಿತು ಎಂದು ದೂರಿದರು.ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ. ಬಿ.ಆರ್. ಅಂಬೇಡ್ಕರ್‌ರವರನ್ನು ಎರಡು ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಎಸ್ಸಿಪಿ, ಟಿಎಸ್ಪಿ ಯೋಜನೆಯ 25 ಸಾವಿರ ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಲೂಟಿ ಹೊಡೆದಿರುವ ದಲಿತ ವಿರೋಧಿ ಕಾಂಗ್ರೆಸ್ ಡಾ.ಬಿ.ಆರ್.ಅಂಬೇಡ್ಕರ್ ಅಂತ್ಯಕ್ರಿಯೆಗೂ ಜಾಗ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್‌ಗಾಂಧಿ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದು ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಜಿ.ಟಿ. ಸುರೇಶ್ ಸಿದ್ದಾಪುರ ಎಚ್ಚರಿಸಿದರು.ನಗರಸಭೆ ಸದಸ್ಯ ಎಚ್. ಶ್ರೀನಿವಾಸ್ ಮಾತನಾಡಿ, 3ನೇ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿಯನ್ನು ಅಸ್ಥಿರಗೊಳಿಸಲು ರಾಹುಲ್‌ಗಾಂಧಿ ಇಂತಹ ಹುಚ್ಚು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಹಿಂದು-ಮುಸಲ್ಮಾನರ ನಡುವೆ ನಡೆದ ಕೋಮುಗಲಭೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂಬ ಹಗಲು ಗನಸು ಕಾಣುತ್ತಿರುವ ರಾಹುಲ್‌ಗಾಂಧಿ ಭಾರತದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ರದ್ದುಪಡಿಸುವುದಾಗಿ ಅಮೇರಿಕಾದಲ್ಲಿ ಹೇಳಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಒಬ್ಬ ನರೇಂದ್ರ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವ ಕನಸು ಕಂಡರೆ ಯೋಗಿ ಆದಿತ್ಯನಾಥ್‌ರಂತವರು ದೇಶದ ತುಂಬಾ ಹುಟ್ಟಿಕೊಳ್ಳುತ್ತಾರೆಂದು ಹೇಳಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್ ಮಾತನಾಡಿ ಎಸ್ಸಿ,ಎಸ್ಟಿಗಳ ಮೀಸಲಾತಿಯನ್ನು ತೆಗೆದು ಹಾಕುತ್ತೇವೆಂದು ರಾಹುಲ್‌ಗಾಂಧಿ ವಿದೇಶದಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿರೋಧಿಗಳು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ತಮ್ಮ ಮಾತಿಗೆ ಅವರು ದೇಶದ ಜನರ ಕ್ಷಮೆ ಕೇಳಬೇಕೆಂದು ಆಗ್ರಸಿದರು.ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ಖಜಾಂಚಿ ಮಾಧುರಿ ಗಿರೀಶ್, ಶಿವಣ್ಣಾಚಾರಿ, ಎಸ್ಸಿ ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ, ಮಂಜು, ಕೃಷ್ಣ, ಪ್ರಕಾಶ್, ಬಸವೇಶ್, ಶಂಭು, ಪಲ್ಲವಿ ಪ್ರಸನ್ನ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಕಿರಣ್, ಪಾಂಡು, ಪರಶುರಾಮ್, ಭರತ್, ಜನಾರ್ದನಸ್ವಾಮಿ, ರಾಮು, ವಸಂತಕುಮಾರ್, ವೀರೇಶ್‌ಜಾಲಿಕಟ್ಟೆ, ನಗರಸಭೆ ಸದಸ್ಯ ಹರೀಶ್, ಪ್ರಭು, ಉದಯ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶೈಲಜಾರೆಡ್ಡಿ, ಉಪಾಧ್ಯಕ್ಷೆ ಶ್ಯಾಮಲಶಿವಪ್ರಕಾಶ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಬಸಮ್ಮ, ಭಾರತಿ, ವೀಣ, ರಜಿನಿ, ಕವನ, ಕವಿತ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.