ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಅರಣ್ಯಕ್ಕೆ ಜಾನುವಾರುಗಳ ಪ್ರವೇಶ ನಿರ್ಧಂಧಿಸಲು ಆದೇಶಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕ್ರಮವನ್ನು ಖಂಡಿಸಿ ನಗರದ ಅರಣ್ಯ ಇಲಾಖೆಯ ಮುಂದೆ ಕಬ್ಬು ಬೆಳೆಗಾರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಅರಣ್ಯ ಇಲಾಖೆಯ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಧಿಕ್ಕಾರ ಕೂಗಿದರು. ಆದೇಶ ಪ್ರತಿಯನ್ನು ನುಚ್ಚುನೂರು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯಸರಾಜ್, ಮದ್ರಾಸ್ ಹೈಕೋರ್ಟಿನ ಆದೇಶವನ್ನು ಈಗ ನೆನಪಿಸಿಕೊಂಡು ಆದೇಶ ಮಾಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷ ಮತ್ತು ವೈಫಲ್ಯವನ್ನು ತೋರಿಸುತ್ತದೆ. ಗೊಬ್ಬರಕ್ಕಾಗಿ ಅಕ್ರಮ ಜಾನುವಾರುಗಳು ಕಾಡಿಗೆ ಪ್ರವೇಶ ಮಾಡುತ್ತವೆ ಎಂದರೆ ಅದರ ಬಗ್ಗೆ ನಿಗಾವಹಿಸಿ ಕ್ರಮ ವಹಿಸುವುದು ಅರಣ್ಯ ಅಧಿಕಾರಿಗಳ ಕ್ರಮ. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ರೈತರು ಮತ್ತು ಜಾನುವಾರುಗಳ ಬಗ್ಗೆ ಗುರುತಿಸಿ ಜಾಗೃತಿ ಮಾಡಿ ರೈತರಿಗೆ ಮನವರಿಕೆ ಮಾಡಿ ಗೊಬ್ಬರದ ಅಕ್ರಮ ಮಾರಾಟ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು. ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗುವ ಜಾನುವಾರುಗಳ ಗೊಬ್ಬರದ ಮೇಲೆ ನಿಷೇಧ ಹೇರಲಿ ಅದನ್ನು ಬಿಟ್ಟು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವಂತೆ ಅರಣ್ಯ ಸಚಿವರ ಆದೇಶ ಆಗಿದೆ. ಆದೇಶಗಳು ರೈತರಿಗೆ ಮಾರಕವಾಗಬಾರದು. ತಕ್ಷಣ ಈ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಕಾಡಂಚಿನ ರೈತರು ಜೀವನೋಪಾಯಕ್ಕಾಗಿ ಕುರಿ, ಮೇಕೆ, ದನ ಸಾಕುತ್ತಿದ್ದಾರೆ. ತುಂಡು ಭೂಮಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲಾಗದೆ ಕಾಡಿನೊಳಗೆ ಮೇಯಿಸುವುದು ರೂಢಿ. ಅರಣ್ಯದೊಳಗೆ ಜಾನುವಾರುಗಳ ಪ್ರವೇಶ ನಿಬಂಧಿಸಿದರೆ ದನ-ಕರುಗಳು ಮೇವಿಲ್ಲದೆ ಸಾಯಬೇಕಾಗುತ್ತದೆ ಎಂದರು, ಐದು ಹುಲಿಗಳ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವ ಈಶ್ವರ ಖಂಡ್ರೆ ನೇರ ಹೊಣೆಗಾರರು. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಸ್ಥಳೀಯ ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಅರಣ್ಯ ಒಳಗಡೆ ಅಕ್ರಮ ರೆಸಾರ್ಟ್ ಮತ್ತು ಗಣಿಗಾರಿಕೆ ನಿಷೇಧಕ್ಕೆ ಕ್ರಮ ಯಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು,೫ ಹುಲಿಗಳ ಮಾರಣ ಹೋಮಕ್ಕೆ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ನೇರ ಕಾರಣ ಅರಣ್ಯ ಅಧಿಕಾರಿಗಳು ಮತ್ತು ಮೇಲಧಿಕಾರಿಗಳ ಹೊಂದಾಣಿಕೆ ಇಲ್ಲದೆ ಗಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ನೌಕರಿಗೆ ಸರಿಯಾದ ಸಂದರ್ಭಕ್ಕೆ ಸಂಬಳ ನೀಡದೆ ಇಂತಹ ನಿರ್ಲಕ್ಷದಿಂದ ಸಂಭವಿಸಿದ ಹುಲಿಗಳ ಸಾವಾಗಿದೆ ಎಂದರು ಈಗಲಾದರೂ ಸಚಿವರು ಎಚ್ಚೆತ್ತುಕೊಂಡು ತಮ್ಮ ಆದೇಶವನ್ನು ಹಿಂಪಡೆಯಬೇಕು. ಅರಣ್ಯ ರಕ್ಷಣೆಯ ಬಗ್ಗೆ ಜವಾಬ್ದಾರಿ ಇದ್ದರೆ ಅಕ್ರಮ ಗಣಿಗಾರಿಕೆ ಮತ್ತು ರೆಸಾರ್ಟ್‌ಗಳನ್ನು ಮತ್ತು ಹೋಂ ಸ್ಟೇ ಹಾಗೂ ಪ್ರಭಾವಿ ರಾಜಕಾರಣಿಗಳು ಅರಣ್ಯ ಪ್ರದೇಶ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಿ ಎಂದರು. ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷರಾದ ಹಂಡುವಿನಹಳ್ಳಿ ಎಚ್ಎ,ಸ್ .ರಾಜು, ಜಿಲ್ಲಾಧ್ಯಕ್ಷರಾದ ಹಾಲಿನ ನಾಗರಾಜ್ , ವಳಗೆರೆ ಗಣೇಶ್ ,ಕೆರೆಹುಂಡಿ ರಾಜಣ್ಣ, ಹಂಡುವಿನಹಳ್ಳಿ ಮಹೇಶ್, ದೇವಣ್ಣ, ಮಲಿಯೂರು ಮಹೇಂದ್ರ, ತಾಲೂಕು ಅಧ್ಯಕ್ಷ ಮಲಿಯೂರ್ ಸತೀಶ್, ನಾಗೇಂದ್ರ, ಮಹೇಶ್ ,ಬಸವರಾಜ್, ನಾಗರಾಜು, ಊರ್ದಳ್ಳಿ ರಾಮಣ್ಣ ,ನಾಗರಾಜಪ್ಪ, ಮುಕುಡಹಳ್ಳಿ ರಾಜು, ಚೇತನ್ ಕುಮಾರ್ ಇದ್ದರು.