ಸಾರಾಂಶ
ಪಾಕಿಸ್ತಾನ ಮೊದಲಿನಿಂದಲೂ ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಆ ಕುರಿತು ಸಾಕಷ್ಟು ಸಾಕ್ಷಿಗಳು ಸಹ ಲಭ್ಯವಾಗಿವೆ. ಅಣುಬಾಂಬ್ ಹಾಕುವುದಾಗಿ ಭಾರತವನ್ನು ಬೆದರಿಸುತ್ತಿದೆ. ಭಾರತವೇನಾದರೂ ಅಣುಬಾಂಬ್ ಬಳಸಿದರೆ ಅದು ಸರ್ವನಾಶವಾಗಲಿದೆ. ದೇಶದ ವಿಚಾರ ಬಂದಾಗ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶಿಸಬೇಕು.
ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಂದಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ನವನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿ ಎಪಿಎಂಸಿ ವ್ಯಾಪಾರಸ್ಥರ ಸಂಘ ಹಾಗೂ ಆಹಾರ ಧಾನ್ಯಗಳ ಸಂಘಟನೆಯು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಾಗರಿಕರ ಹತ್ಯೆ ನಡೆಸಿದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪ್ರವಾಸಕ್ಕೆಂದು ತೆರಳಿದವರ ಜೀವ ತೆಗೆದು ಅಟ್ಟಹಾಸ ಮೆರೆದ ಪಾಕಿಸ್ತಾನದ ಉಗ್ರರಿಗೆ ಭಾರತವು ತಕ್ಕ ಉತ್ತರ ನೀಡಲಿದೆ. ಅಮಾಯಕರನ್ನು ಅಮಾನುಷವಾಗಿ ಕೊಂದು ಜಿಹಾದ್ ಎನ್ನುತ್ತಿರುವವರ ಹೆಡೆಮುರಿ ಕಟ್ಟಬೇಕಿದೆ. ಕೆಲವು ದೇಶ ಹೊರತುಪಡಿಸಿ, ಇಡೀ ಜಗತ್ತು ಭಯೋತ್ಪಾದನೆ ವಿರುದ್ಧ ನಿಂತಿದೆ. ಅದನ್ನು ಬುಡಸಮೇತ ಕಿತ್ತೊಗೆಯಲು ಭಾರತ ಸರ್ವಸನ್ನದ್ಧವಾಗಿದೆ ಎಂದರು.
ಪಾಕಿಸ್ತಾನ ಮೊದಲಿನಿಂದಲೂ ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಆ ಕುರಿತು ಸಾಕಷ್ಟು ಸಾಕ್ಷಿಗಳು ಸಹ ಲಭ್ಯವಾಗಿವೆ. ಅಣುಬಾಂಬ್ ಹಾಕುವುದಾಗಿ ಭಾರತವನ್ನು ಬೆದರಿಸುತ್ತಿದೆ. ಭಾರತವೇನಾದರೂ ಅಣುಬಾಂಬ್ ಬಳಸಿದರೆ ಅದು ಸರ್ವನಾಶವಾಗಲಿದೆ. ದೇಶದ ವಿಚಾರ ಬಂದಾಗ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.ಸಂಘದ ಹಿರಿಯ ಸದಸ್ಯ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಕ್ಕೆ ನಾವೆಲ್ಲರೂ ಬದ್ಧರಿರುತ್ತೇವೆ. ಮುಂಬರುವ ದಿನಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ಹಾಗೂ ಅಲ್ಲಿಗೆ ತೆರಳುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಅಶೋಕ ಬಾಳಿಕಾಯಿ, ಚನ್ನು ಹೊಸಮನಿ, ಜಿ.ಎಂ. ಚಿಕ್ಕಮಠ, ಅನಿಲ ಓಸ್ತವಾಲ, ಮುತ್ತು ಪಾಟೀಲ, ಶಿವಯೋಗಿ ಹೊಸಕಟ್ಟಿ, ಸುರೇಶ ಜೈನ್, ಶಿವನಗೌಡ ಪಾಟೀಲ, ರುದ್ರಪ್ಪ ಬೆಟಗೇರಿ, ಸುರೇಶ ಹುಣಸಿಕಟ್ಟಿ, ಗುಂಡಪ್ಪ ಸಾವುಕಾರ, ಈಶ್ವರಪ್ಪ ಹೆಬಸೂರ, ಸಿದ್ದಲಿಂಗೇಶ ಕೊಟ್ಟೂರಶೆಟ್ಟರ್, ಶಂಭು ಅಂಗಡಿ ಇದ್ದರು.