ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜಲ್ಲಿ, ಕಲ್ಲು, ಎಂ ಸ್ಯಾಂಡ್ ಸೇರಿದಂತೆ ಕ್ರಷರ್‌ನ ಸಾಮಗ್ರಿಗಳನ್ನು ತುಂಬಿ ದಿನನಿತ್ಯ ಸಾವಿರಾರು ಟಿಪ್ಪರ್, ಟ್ರ್ಯಾಕ್ಟರ್ ಹಾಗೂ ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆ ಹದಗೆಡುವ ಜೊತೆಗೆ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಆರೋಪಿಸಿ ತಾಲೂಕಿನ ಕಾಳೇನಹಳ್ಳಿ ಹಾಗೂ ಟಿ.ಎಂ.ಹೊಸೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ತಾಲೂಕಿನ ಕಾಳೇನಹಳ್ಳಿ ಬಳಿಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕ್ರಷರ್ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಈ ಭಾಗದ ರಸ್ತೆಯಲ್ಲಿ ಪ್ರತಿನಿತ್ಯ ಗಣಿಗಾರಿಕೆ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಯೆಲ್ಲಾ ಗುಂಡಿಮಯವಾಗಿ ತೀರಾ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯಕ್ಕಿಂತ ಹೆಚ್ಚಿನ ಲೋಡ್ ನೊಂದಿಗೆ ಸಂಚರಿಸುವ ವಾಹನಗಳ ಹಾವಳಿಯಿಂದಾಗಿ ಸ್ಥಳೀಯರು, ರೈತರು ಹಾಗೂ ವಿದ್ಯಾರ್ಥಿಗಳು ಓಡಾಡಲು, ನಿದ್ದೆ ಮಾಡಲು ಆಗುತ್ತಿಲ್ಲ. ಯಾವಾಗ ಏನಾಗಲಿದೆಯೋ ಎಂಬ ಆತಂಕದೊಂದಿಗೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಕ್ರಷರ್‌ನಿಂದ ಬರುವ ರಾಯಲ್ಟಿ ಹಣ ಪಡೆದು ಕುಳಿತುಕೊಂಡಿದೇ ವಿನಃ ರಸ್ತೆಗಳ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ರಸ್ತೆ ಸಂಪೂರ್ಣ ಧೂಳಿನಿಂದ ಆವರಿಸಿದ್ದು, ಮನೆ ಹಾಗೂ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿರುವ ಜೊತೆಗೆ ಮಕ್ಕಳು ಹಾಗೂ ವಯೋವೃದ್ದರು ಕಾಯಿಲೆಯಿಂದ ಬಳಲುವಂತಾಗಿದೆ. ಒಮ್ಮೊಮ್ಮೆ ರಸ್ತೆಗೆ ನೀರು ಹಾಕುವುದರಿಂದ ರಸ್ತೆಯೆಲ್ಲಾ ಕೆಸರು ಮಯವಾಗಿ, ಗ್ರಾಮದಲ್ಲಿ ನಡೆದುಕೊಂಡುವ ಹೋಗುವವರು ಹಲವ ಬಾರಿ ಬಿದ್ದು, ಕೈ ಕಾಲುಗಳಿಗೆ ಗಾಯವಾಗಿರುವ ಘಟನೆಗಳು ನಡೆದಿವೆ. ಹಾಗಾಗಿ ಇಲ್ಲಿ ಓಡಾಡುವುದೇ ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ಗುಂಡಿ ಬಿದ್ದ ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಇತ್ತ ತಿರುಗಿಯೂ ನೋಡುತ್ತಿಲ್ಲ. ಅಕ್ರಮ ಕ್ರಷರ್‌ಗಳಿಗೆ ಲೈಸೆನ್ಸ್ ನೀಡಿ, ಓವರ್ ಲೋಡಿಂಗ್ ಮೂಲಕ ಸಾವಿರಾರ ವಾಹನಗಳು ಸಂಚರಿಸುತ್ತಿದ್ದರೂ ಅರಣ್ಯ ಇಲಾಖೆ, ಆರ್‌ಟಿಒ ಅಧಿಕಾರಿಗಳು ಸೇರಿದಂತೆ ಕೇಳುವವರೇ ಯಾರೂ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.ಕೂಡಲೇ ಸಂಬಂಧಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಕ್ರಮ ಕಲ್ಲು ಕ್ವಾರೆಗಳನ್ನು ಸ್ಥಗಿತಗೊಳಿಸಬೇಕು. ಜೊತೆಗೆ ಗ್ರಾಮದಲ್ಲಿ ಗುಂಡಿಬಿದ್ದು ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಳೇನಹಳ್ಳಿ, ಕಾಳೇನಹಳ್ಳಿ ಶಡ್ಡು ಹಾಗೂ ಟಿ.ಎಂ. ಹೊಸೂರು ಗ್ರಾಮಗಳ ಗ್ರಾಮಸ್ಥರು ಇದ್ದರು.