ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ನೀಡಿದೆ. ಆದರೆ, ಜಾತಿ ಆಧಾರದ ಮೇಲೆ ವ್ಯಕ್ತಿಯನ್ನು ಅವಮಾನಿಸುವ ಅಥವಾ ಅವರು ಬಳಸಿದ ಸ್ಥಳವನ್ನು ಶುದ್ಧೀಕರಿಸುವಂತಹ ಆಚರಣೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ಖಂಡದ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದ ನಂತರ ಅದೇ ಸ್ಥಳವನ್ನು ಶುದ್ಧೀಕರಣ ಮಾಡಿ ಹೋಮ ಹವನ ಮಾಡಿದ ಮನುವಾದಿಗಳ ವಿರುದ್ಧ ದಲಿತಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಉತ್ತರಾಖಂಡ ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ನಂತರ ಶುಚಿಗೊಳಿಸಿ, ಹೋಮ-ಹವನ ನಡೆಸಿ ಅಸ್ಪೃಶ್ಯತೆ ಆಚರಿಸಲಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ನೀಡಿದೆ. ಆದರೆ, ಜಾತಿ ಆಧಾರದ ಮೇಲೆ ವ್ಯಕ್ತಿಯನ್ನು ಅವಮಾನಿಸುವ ಅಥವಾ ಅವರು ಬಳಸಿದ ಸ್ಥಳವನ್ನು ಶುದ್ಧೀಕರಿಸುವಂತಹ ಆಚರಣೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ ಎಂದು ಕಿಡಿಕಾರಿದರು.

ಜಾತಿ ಮತ್ತು ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಉಪಾಧ್ಯಕ್ಷರಾದ ಬಸ್ತಿ ರಂಗಪ್ಪ, ಡಿ.ಪ್ರೇಂಕುಮಾರ್, ದಸಂಸ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಸಂಘಟನಾ ಸಂಚಾಲಕ ಸಂತೋಷ್ ಕುಮಾರ್, ತಾಲೂಕು ಸಂಚಾಲಕ ನಾಟನಹಳ್ಳಿ ಸೋಮರಾಜು, ದಲಿತ ಸೇನೆ ಜಿಲ್ಲಾಧ್ಯಕ್ಷ ಎನ್.ಜೆ.ಮಂಜು, ತಾಲೂಕು ಅಧ್ಯಕ್ಷ ಚೌಡೇನಹಳ್ಳಿ ದೇವರಾಜು, ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಊಚನಹಳ್ಳಿ ನಟರಾಜು, ಗೌರವಾಧ್ಯಕ್ಷ ಸೋಮಸುಂದರ್, ಡಿ.ಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮೀಪುರ ರಂಗಸ್ವಾಮಿ, ಮುಖಂಡರಾದ ಬಸವೇಶ್, ಅಲಂಬಾಡಿ ಕಾವಲು ಚನ್ನಕೃಷ್ಣ, ಹರಿಹರಪುರ ನರಸಿಂಹ, ಶಂಕರ್, ತೆಂಡೇಕೆರೆ ನಿಂಗಯ್ಯ,ಬಂಡಿಹೊಳೆ ರಮೇಶ್, ಮುದುಗೆರೆ ಮಹೇಂದ್ರ, ಮುರುಗೇಶ್, ನಗರೂರು ಮಂಜಯ್ಯ, ಸೋಮು, ಶಿವಣ್ಣ, ರಂಗರಾಮು, ಚಲುವರಾಜು ಹಲವರು ಹಾಜರಿದ್ದರು.