ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಬೂಕನಕೆರೆ ಹೋಬಳಿ ಕೇಂದ್ರದಲ್ಲಿದ್ದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯನ್ನು ನಾಗಮಂಗಲಕ್ಕೆ ಸ್ಥಳಾಂತರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ನಡೆ ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು.ಜಿಲ್ಲಾ ರೈತ ಸಂಘದ ಮಾಜಿ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು, ಸಚಿವ ಚೆಲುವರಾಯಸ್ವಾಮಿ ಅವರು ಸಣ್ಣ ನೀರಾವರಿ ಕಚೇರಿಯನ್ನು ತಮ್ಮ ತಾಲೂಕಿಗೆ ಸ್ಥಳಾಂತರ ಮಾಡುತ್ತಿರುವುದರ ಹಿಂದೆ ಸ್ವಾರ್ಥ ತುಂಬಿದೆ ಎಂದು ದೂರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಚೆಲುವರಾಯಸ್ವಾಮಿಗೆ ತೀರಾ ಹಿನ್ನಡೆಯಾಗಿದೆ. ಮರೆಮಾಚಲು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ನಾಗಮಂಗಲಕ್ಕಿಂತ ಹೆಚ್ಚು ಮತಗಳನ್ನು ಕಾಂಗ್ರೆಸ್‌ಗೆ ನೀಡಿದ ತಾಲೂಕಿನ ಜನರಿಗೆ ಮೋಸಮಾಡಲು ಹೊರಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.ರೈತ ಹೋರಾಟಗಾರ ಮುದುಗೆರೆ ರಾಜೇಗೌಡ ಮಾತನಾಡಿ, ಕೆ.ಆರ್.ಪೇಟೆ ತಾಲೂಕಿಗೆ ಬಹಳ ಹಿಂದಿನಿಂದಲೂ ಅನ್ಯಾಯವಾಗುತ್ತಿದೆ. ತಾಲೂಕಿನಲ್ಲಿ ಬಹುದೊಡ್ಡ ಏತ ನೀರಾವರಿ ಯೋಜನೆ ಚಾಲನೆಯಲ್ಲಿದೆ. ಜೊತೆಗೆ ಹಲವು ಕೆರೆಗಳ ಅಭಿವೃದ್ಧಿಗೆ ಅನುದಾನವನ್ನು ಒದಗಿಸಬೇಕಾಗಿದೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಬೂಕನಕೆರೆಯವರು. ರೈತರ ಬದುಕಿನ ಜೊತೆ ತಳುಕು ಹಾಕಿಕೊಂಡಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳ ಅಭಿವೃದ್ಧಿಪಡಿಸಬೇಕಾಗಿದೆ. ಹೂಳನ್ನು ತೆಗೆಸಿ ಅಂತರ್ಜಲ ಉಳಿಸಿಕೊಳ್ಳಬೇಕಾಗಿದೆ. ಹೋಬಳಿಯು ಅತಿ ಹೆಚ್ಚು ತೋಟಗಾರಿಕೆ ಬೆಳೆಯನ್ನು ಬೆಳೆಯುವ ಪ್ರದೇಶ. ಆದ್ದರಿಂದ ಚೆಲುವರಾಯಸ್ವಾಮಿ ಅವರು ನಮ್ಮ ತಾಲೂಕಿನ ಕಚೇರಿಯನ್ನು ಸ್ಥಳಾಂತರ ಮಾಡಬಾರದು ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ಮಾಜಿ ಸದಸ್ಯ ಹುಲ್ಲೇಗೌಡ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ಬೂಕನಕೆರೆ ಗ್ರಾಪಂ ಅಧ್ಯಕ್ಷ ಶ್ಯಾಮ್ ಪ್ರಸಾದ್, ಸದಸ್ಯ ಸ್ವಾಮಿ.ಬಿ, ರೈತ ಮುಖಂಡರಾದ ರಾಮಕೃಷ್ಣೇಗೌಡ, ಕೃಷ್ಣೇಗೌಡ, ರಾಜೇಶ್, ಜೆಸಿಬಿ ಗೋಪಾಲ್, ರಮೇಶ್.ಕೆ.ಎನ್., ಕುರುಬಳ್ಳಿ ಪರಮೇಶ್, ಗಂಜಿಗೆರೆ ಗ್ರಾಪಂ ಅಧ್ಯಕ್ಷ ರಾಮಕೃಷ್ಣೇಗೌಡ, ವಿಎಸ್‌ಎಸ್‌ಎನ್ ನಿರ್ದೇಶಕ ಮುದುಗೆರೆ ಯೋಗಣ್ಣ, ದೇವೇಗೌಡ ಮಾವಿನಕೆರೆ ಗೋಪಿ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.