ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕಗ್ಗೊಲೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳು ಮೌನ ಪ್ರತಿಭಟನೆ ಮಾಡುವುದರ ಮೂಲಕ ಅಕ್ರೋಶ ವ್ಯಕ್ತಪಡಿಸಿದರು.ಆಲೂರು ಪಟ್ಟಣದ ಮುಖ್ಯರಸ್ತೆಯ ಪೊಲೀಸ್ ಸ್ಟೇಷನ್ ಮುಂಭಾಗ ಮಾನವ ಸರಪಳಿ ರಚಿಸಿ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಮೌನ ಪ್ರತಿಭಟನೆ ನಡೆಸಿ, ಹಿಂದೂಗಳು ತನ್ನ ತಾಯ್ನೆಲ ಬಿಟ್ಟು ಬೇರೆಲ್ಲಿ ಹೋಗಬೇಕು? ವಿಶ್ವ ಸಂಸ್ಥೆ ತಕ್ಷಣ ಮಧ್ಯ ಪ್ರವೇಶಿಸಿ ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ರಕ್ಷಣೆ ಮಾಡಲಿ ಎಂದು ವಿಶ್ವಸಂಸ್ಥೆಯನ್ನು ಒತ್ತಾಯಿಸಿದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷೆ ಉಮಾ ರವಿಪ್ರಕಾಶ್ ಮಾತನಾಡಿ, ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಚಿತ್ರಹಿಂಸೆ ನೀಡುತ್ತಿದ್ದು, ಮಾರಣಹೋಮ ನಡೆಸುವುದು ನಿಜಕ್ಕೂ ಖಂಡನೀಯ. ಪ್ರಪಂಚದ ಎಲ್ಲಾ ದೇಶಗಳಲ್ಲೂ ಹಿಂದೂಗಳಿದ್ದಾರೆ. ಅವರಿಗೆ ರಕ್ಷಣೆಯನ್ನು ಒದಗಿಸುವುದು ಪ್ರತಿಯೊಂದು ದೇಶದ ಕರ್ತವ್ಯ, ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಈ ರೀತಿ ಪೈಶಾಚಿಕ ಕೃತ್ಯ ನಡೆಸುವುದು ಬಹುಸಂಖ್ಯಾತರಾದ ಭಾರತದ ಹಿಂದೂಗಳಿಗೆ ತುಂಬಾ ಬೇಸರದ ಹಾಗೂ ನೋವಿನ ಸಂಗತಿಯಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ ಮಾತನಾಡಿ, ಸರ್ವಧರ್ಮದ ಸಮನ್ವಯ ದೇಶವಾಗಿರುವ ಭಾರತದಲ್ಲಿ ಎಲ್ಲಾ ವರ್ಗದ ಜನರನ್ನು, ಮಹಿಳೆಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವಾಗಿದೆ. ಬಾಂಗ್ಲಾದೇಶದ ಜನರು ವಿಶೇಷವಾಗಿ ಹಿಂದೂಗಳನ್ನೇ ಗುರಿ ಮಾಡಿಕೊಂಡು ಚಿತ್ರಹಿಂಸೆ, ದೌಜ್ಯನ್ಯ, ಕೊಲೆ ಮಾಡುವುದನ್ನು ಪ್ರತಿನಿತ್ಯ ಸುದ್ದಿ ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಇದೇ ರೀತಿ ಮುಂದುವರೆದರೆ, ಎಲ್ಲಾ ರಾಷ್ಟ್ರಗಳಲ್ಲೂ ಮತೀಯ ಗಲಭೆ ನಡೆಯಲು ಪ್ರೇರಣೆಯಾಗುತ್ತಿದೆ. ಇಂತಹ ಕೃತ್ಯ ನಡೆಯದಂತೆ ವಿಶ್ವಸಂಸ್ಥೆ ನಿರ್ಬಂಧವನ್ನು ಹೇರಬೇಕು ಹಾಗೂ ಪ್ರಪಂಚದ ಎಲ್ಲಾ ದೇಶದಲ್ಲಿರುವ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ ಮಾತನಾಡಿ, ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರಿಗೆ ಸುರಕ್ಷತೆ ನೀಡುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ. ಎಲ್ಲ ದೇಶಗಳಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಬೇಕು. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವುದು ಇಡೀ ವಿಶ್ವವನ್ನೇ ಗಮನ ಸೆಳೆದಿದೆ ಎಂದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕದಾಳು ಲೊಕೇಶ್, ರಮೇಶ್, ಹೇಮಂತ್, ವಿಕಾಸ್, ನವೀನ್, ದಡದಹಳ್ಳಿ ಕೃಷ್ಣಮೂರ್ತಿ, ಅಬ್ಬನ, ಧ್ರುವ, ಭರಣ್, ಮಲ್ಲೇಶ್ ಹೊಸಪುರ, ಪಪಂ ಸದಸ್ಯ ಹರೀಶ್, ಬಾಲಲೋಚನಾ, ರುದ್ರೇಗೌಡ, ಕೇಶವಮೂರ್ತಿ, ರವಿ, ಜೆಡಿಎಸ್ ಮುಖಂಡರಾದ ಮಲ್ಲಿಕಾರ್ಜುನ್, ಯೊಗೇಶ್, ನಂದೀಶ್ ಹೊಸೂರು, ಜಗದೀಶ್ ಕಣಗಾಲು, ಕೃಷ್ಣೇಗೌಡ ಮಣಿಪುರ ಮುಂತಾದವರು ಉಪಸ್ಥಿತರಿದ್ದರು.-----------