ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಆಕ್ರಮಣವನ್ನು ಕೊನೆಗಾಣಿಸಿ ಭಾರತೀಯರ ರಕ್ಷಣೆಗೆ ಭಾರತ ಸರಕಾರ ಮುಂದಾಗಬೇಕೆಂದು ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಮಹಿಪಾಲ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ನಮ್ಮ ಪಕ್ಕದ ಬಾಂಗ್ಲಾದೇಶವು ತೀವ್ರ ಹಿಂಸಾಚಾರದಿಂದ ಬಳಲುತ್ತಿದೆ. ಬಾಂಗ್ಲಾದ ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ನಂತರ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಈ ಗೊಂದಲಮಯ ಪರಿಸ್ಥಿತಿಯಲ್ಲಿ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿವೆ. ಬಾಂಗ್ಲಾದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಹಿಂದೂ ಧಾರ್ಮಿಕ ಕೇಂದ್ರಗಳು, ಹಿಂದೂ ವ್ಯಾಪಾರ ಸಂಸ್ಥೆಗಳು, ಮತ್ತು ಹಿಂದೂ ಮನೆಗಳನ್ನು ಗುರಿಯಾಗಿಸಿಕೊಂಡು ತೀವ್ರ ರೀತಿಯ ದಾಳಿ ನಡೆಯುತ್ತಿದೆ ಎಂದರು. ಬಾಂಗ್ಲಾದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಹಿಂದೂ ರುದ್ರಭೂಮಿಗಳು, ನೂರಾರು ಮಠ, ಮಂದಿರಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿವೆ. ಜಿಹಾದಿ ಹಿಂಸಾಚಾರ ಮತ್ತು ಭಯೋತ್ಪಾದನೆಯ ಗುರಿಯಾದ ಯಾವುದೇ ಜಿಲ್ಲೆ ಬಾಂಗ್ಲಾದೇಶದಲ್ಲಿ ಉಳಿದಿಲ್ಲ. ಕಾಲಕಾಲಕ್ಕೆ ಸಂಭವಿಸುವ ಇಂತಹ ಗಲಭೆಗಳ ಪರಿಣಾಮ ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ೨೮% ರಷ್ಟಿದ್ದ ಹಿಂದೂಗಳು ಈಗ ೮% ಕ್ಕೆ ಇಳಿದಿದ್ದಾರೆ. ಹೀಗಾಗಿ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸಂರಕ್ಷಣೆಗೆ ಭಾರತ ಸರಕಾರ ಮಧ್ಯ ಪ್ರವೇಶಿಸಬೇಕೆಂದು ಸಮಿತಿಯು ಒತ್ತಾಯಿಸುತ್ತದೆ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಭಾರತ ಸರಕಾರವು ಕೈಗೊಳ್ಳುವುದು, ವಿಶ್ವಸಂಸ್ಥೆಯಲ್ಲಿ ಈ ಘಟನೆಯ ಕುರಿತು ಬೆಳಕನ್ನು ಚೆಲ್ಲಬೇಕು. ಬಾಂಗ್ಲಾದೇಶದಲ್ಲಿ ನಿರಾಶ್ರಿತರಾದ ಹಿಂದೂಗಳು ಭಾರತಕ್ಕೆ ಬರುವುದಿದ್ದರೆ ಅವರಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಈ ಗಲಭೆಯನ್ನೇ ಮುಂದಿಟ್ಟುಕೊಂಡು ಭಾರತದ ಗಡಿಯಲ್ಲಿ ನುಸುಳುವ ಪ್ರಯತ್ನಗಳು ನಡೆಯಬಹುದು. ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.ಘಟನೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಎನ್.ಆರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಡೀಸಿ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹಿಂದೂ ಜಾಗರಣ ವೇದಿಕೆ ಸಂಚಾಲಕ ಲೋಕೇಶ್, ಅಧಿವ್ಯಕ್ತಿ ಪರಿಷತ್ತು ಸಂಯೋಜಕ ಮಂಜುನಾಥ್, ಜಿಲ್ಲಾ ಸಹ ಕಾರ್ಯದರ್ಶಿ ಮಂಜುಗೌಡ, ಸಂಚಾಲಕ ಲೇಪಾಕ್ಷ ಇತರರು ಉಪಸ್ಥಿತರಿದ್ದರು.