ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಂತಾಪ ಸೂಚಕ ಸಭೆ

| Published : Jan 07 2025, 12:33 AM IST

ಸಾರಾಂಶ

ನಿಧನರಾದ ಹಿರಿಯ ಸಾಹಿತಿ ನಾ. ಡಿಸೋಜ ಅವರ ಆತ್ಮಕ್ಕೆ ಶಾಂತಿ ಕೋರಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸಂತಾಪ ಸೂಚಕ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಿಧನರಾದ ರಾಜ್ಯದ ಹಿರಿಯ ಸಾಹಿತಿಗಳು, 2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದ ನಾ.ಡಿಸೋಜ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂತಾಪ ಸೂಚಕ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಮಾತನಾಡಿ ಸಾಹಿತ್ಯ ಲೋಕ ಕಂಡಂತಹ ಸೃಜನಶೀಲ ಪರಿಸರ ಕಾಳಜಿಯುಳ್ಳ ಕಥೆಗಾರರೆನಿಸಿದ ನಾ ಡಿಸೋಜಾ ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಸಾಹಿತ್ಯ ಕೃಷಿ ನಡೆಸಿದ್ದಾರೆ. ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿರುತ್ತಾರೆ. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಮಾತನಾಡಿ, 40 ಕ್ಕೂ ಅಧಿಕ ಕಾದಂಬರಿ, ಕಥೆ, ಕವನ ಸಂಕಲನ ರಚಿಸಿದ್ದ ಡಿಸೋಜ ಅವರು ನೂರಾರು ಕಥೆ, ಕವನಗಳನ್ನು ಬರೆದಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆಯ ಸಾಗರದವರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಸಾಹಿತ್ಯ ಲೋಕದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಲಭಿಸಿದೆ.

ಮಡಿಕೇರಿಯಲ್ಲಿ 2014 ರಲ್ಲಿ ಆಯೋಜಿತವಾಗಿದ್ದ 80 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಶಸ್ವಿ ಸಮ್ಮೇಳನಕ್ಕೆ ಕಾರಣಕರ್ತರಾಗಿದ್ದರು.

ಅವರ ಹೆಸರಿನಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನೆನಪಿಗೋಸ್ಕರ ದತ್ತಿ ನಿಧಿ ಸ್ಥಾಪಿಸಿದ್ದು, ಮಕ್ಕಳ ಕಥೆ ನಾಟಕ ಸಂಬಂಧಿಸಿದಂತೆ ಈಗ 10 ವರ್ಷಗಳಿಂದ ದತ್ತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದರು.

ಶ್ರದ್ಧಾಂಜಲಿ ಸಭೆಯು ಜೂನಿಯರ್ ಕಾಲೇಜ್ ಆವರಣದಲ್ಲಿರುವ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿಗಳಾದ ಎಸ್.ಎಸ್ ಸಂಪತ್ ಕುಮಾರ್, ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಹೋಬಳಿ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ನಿರ್ದೇಶಕರಾದ ಕೆ.ಟಿ ಬೇಬಿ ಮ್ಯಾಥ್ಯು, ಸುನೀತಾ ಪ್ರೀತು, ಮಡಿಕೇರಿ ತಾಲೂಕು ನಿಕಟ ಪೂರ್ವ ಅಧ್ಯಕ್ಷರಾದ ಅಂಬೆಕಲ್ ನವೀನ್, ಅಹಿಂದ ಒಕ್ಕೂಟದ ಅಧ್ಯಕ್ಷರಾದ ಟಿ.ಎಂ. ಮುದ್ದಯ್ಯ, ಶಿಕ್ಷಣ ಇಲಾಖೆಯ ಗುರುರಾಜ್ ಕೆ ಪಿ, ಎಂ ಕೃಷ್ಣಪ್ಪ, ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಸಾಹಿತಿಗಳಾದ ಡಾ.ಜೆ ಸೋಮಣ್ಣ, ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ ಮಡಿಕೇರಿಯ ನಗರದ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರು ಹಾಗೂ ಸಾಹಿತ್ಯ ಪರಿಷತ್ ಸಿಬ್ಬಂದಿ ರೇಣುಕಾ ಉಪಸ್ಥಿತರಿದ್ದರು.