ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ ಹಿರಿಯ ಧೀಮಂತ ರಾಜಕಾರಣಿ ಎಸ್.ಎಂ.ಕೃಷ್ಣರವರು ವಿಧಿವಶರಾಗಿರವುದು ವಿಷಾದದ ಸಂಗತಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.ಬಾಲ್ಯದಿಂದಲೂ ತೀಕ್ಷಣಮತಿಗಳಾಗಿದ್ದ ಎಸ್.ಎಂ.ಕೃಷ್ಣರವರು ಅಪ್ಪಟ ಗ್ರಾಮೀಣ ಪ್ರತಿಭೆ ಹೊಂದಿದ್ದರು. ಫುಲ್ ಬ್ರೈಟ್ ವಿದ್ಯಾರ್ಥಿವೇತನ ಪಡೆದು ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದರು. ಮದ್ದೂರಿನಿಂದ ಶಾಸಕರಾಗಿ 1962ರಲ್ಲಿ ಆಯ್ಕೆಯಾದ ಅವರು, ವರ್ಣರಂಜಿತ ರಾಜಕೀಯದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದರು.
ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆಗಳಿಗೆ ಆಯ್ಕೆಯಾಗಿದ್ದರು. ಅಪಾರ ರಾಜಕೀಯ ಪ್ರಜ್ಞೆಯನ್ನು ಹೊಂದಿದ್ದರು. ಮಾನವತಾವಾದಿಯಾಗಿದ್ದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಬೆಂಗಳೂರು ನಗರವನ್ನು ಸಿಲಿಕಾನ್ ಸಿಟಿಯಾಗಿ ಪರಿವರ್ತಿಸುವ ಕನಸು ಹೊತ್ತ ದೂರದೃಷ್ಟಿಯ ನೇತಾರರು. ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕಾ, ಹಣಕಾಸು ಖಾತೆಗಳ ಸಚಿವರಾಗಿದ್ದರು. ವಿದೇಶಾಂಗ ಸಚಿವರಾಗಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು.ಕಾನೂನು ಕಾಲೇಜಿನಲ್ಲಿ ಕೆಲಕಾಲ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿದ್ದರು. ಇಂಗ್ಲೆಂಡ್, ನ್ಯೂಜಿಲೆಂಡ್, ವಿಶ್ವಸಂಸ್ಥೆಗಳಿಗೆ ಭೇಟಿ ನೀಡಿದ ಪಾರ್ಲಿಮೆಂಟರಿ ನಿಯೋಗದ ಅಧ್ಯಕ್ಷರೂ ಆಗಿದ್ದರು. ಸಾರ್ವಜನಿಕ ಜೀವನದಲ್ಲಿ ಸಜ್ಜನಿಕೆಯ ಮೂರ್ತಿಯಾಗಿದ್ದರು. ಸದಾ ಜನಪರ ನಿಲುವನ್ನು ಹೊಂದಿದ್ದರು. ಅವರ ರಾಜಕೀಯ ಜೀವನ ಒಂದು ತೆರೆದ ಪುಸ್ತಕವಾಗಿತ್ತು. ಅವರಿಗೆ ಎಲ್ಲಾ ಪಕ್ಷಗಳಲ್ಲಿಯೂ ಅಭಿಮಾನಿಗಳಿದ್ದರು. ಅವರೊಬ್ಬ ಅಜಾತಶತ್ರುಗಳಾಗಿದ್ದರು.
ಶ್ರೀಮಠದ ಅಭಿಮಾನಿಗಳಾಗಿದ್ದು, ಹಲವಾರು ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಅವರ ಅಗಲುವಿಕೆಯಿಂದ ಕರ್ನಾಟಕದ ಸುಪುತ್ರರೊಬ್ಬರು ಅಸ್ತಂಗತರಾದಂತಾಗಿದೆ. ದಿವಂಗತರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬ ಸದಸ್ಯರು, ಬಂಧು ಬಾಂಧದವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಶ್ರೀಗಳು ಹಾರೈಸಿದ್ದಾರೆ.ಎಸ್.ಎಂ. ಕೃಷ್ಣ ನಿಧನಕ್ಕೆ ಆರ್. ರಘು ಸಂತಾಪ
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅಭಿವೃದ್ಧಿ ಹಾಗೂ ಪ್ರಗತಿಗೆ ಆದ್ಯತೆ ಕೊಟ್ಟು ಔದ್ಯೋಗಿಕ ಕ್ಷೇತ್ರಕ್ಕೆ ಅಪರಿಮಿತ ಉತ್ತೇಜನ ನೀಡಿ ಮಹಿಳೆಯರು, ರೈತರು, ದುರ್ಬಲ ವರ್ಗಗಳಿಗೆ ಹತ್ತು-ಹಲವು ಕಾರ್ಯ್ರಮಗಳನ್ನು ನೀಡಿ, ಶ್ರೇಷ್ಠ ಆಡಳಿತಗಾರರೆನಿಸಿಕೊಂಡ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘು ತೀವ್ರ ಸಂತಾಪ ಸೂಚಿಸಿದ್ದಾರೆ.ಅವರ ಅಗಲಿಕೆಯಿಂದ ಕರ್ನಾಟಕ ಹಾಗೂ ದೇಶ ಒಬ್ಬ ಮುತ್ಸದ್ದಿ ಹಾಗೂ ಸುಧಾರಣಾವಾದಿ ಧುರಿಣರೊಬ್ಬರನ್ನು ಕಳೆದುಕೊಂಡಂತಾಗಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕೆ ಉತ್ತಮ ಮಾರ್ಗದರ್ಶನ ನೀಡಬಹುದಾಗಿದ್ದ ಎಸ್.ಎಂ. ಕೃಷ್ಣ ಅವರು ಇನ್ನಿಲ್ಲವಾಗಿರುವುದು ರಾಜ್ಯಕ್ಕೆ ಬಹುದೊಡ್ಡ ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ.ಎಸ್ಎಂಕೆ ನಿಧನಕ್ಕೆ ಡಾ.ಈ.ಸಿ.ನಿಂಗರಾಜ್ ಗೌಡ ಸಂತಾಪ
ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಸಂತಾಪ ಸೂಚಿಸಿದ್ದಾರೆ.ಎಸ್.ಎಂ. ಕೃಷ್ಣರವರ ಜೊತೆ ನನ್ನ ವಿದ್ಯಾರ್ಥಿ ಜೀವನದಿಂದಲೂ ತುಂಬಾ ಒಳ್ಳೆಯ ಒಡನಾಟವಿತ್ತು. ನಮ್ಮ ಯಾವುದೇ ವಿದ್ಯಾರ್ಥಿ ಸಮಸ್ಯೆಗಳನ್ನೂ ಅವರಿಗೆ ತಿಳಿಸಿದಾಗ, ತುಂಬಾ ತಾಳ್ಮೆಯಿಂದ ಕೇಳಿ, ತದನಂತರ ಸೂಕ್ತ ಪರಿಹಾರ ನೀಡುತ್ತೀದ್ದರು. ನನಗೆ ವಯಕ್ತಿಕವಾಗಿ ರಾಜಕೀಯ ಮಾರ್ಗದರ್ಶಿಗಳಾಗಿದ್ದರು. ಅವರ ನಿಧನ ನನಗೆ ತುಂಬಾ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.ಡಾ.ಎನ್.ಎಲ್.ಭಾರತೀಶಂಕರ್ ಸಂತಾಪ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಟಿ. ನರಸೀಪುರದ ಮಾಜಿ ಶಾಸಕ ಡಾ.ಎನ್.ಎಲ್. ಭಾರತೀಶಂಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.ಎಸ್.ಎಂ. ಕೃಷ್ಣ ಅತ್ಯಂತ ಸೌಮ್ಯ ಸ್ವಭಾವದ ರಾಜಕಾರಣಿ. ಶಾಲಾ ಮಕ್ಕಳಿಗೆ ಬಿಸಿಯೂಟ, ರೈತರಿಗೆ ಯಶಸ್ವಿನಿ, ಮಹಿಳೆಯರಿಗೆ ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸಿದ್ದರು. ಬೆಂಗಳೂರು ಐಟಿ- ಬಿಟಿ ನಗರವಾಗಿ ಹೊರಹೊಮ್ಮಲು ಅವರೇ ಕಾರಣ. ಅವರ ನಿಧನದಿಂದ ದೂರದೃಷ್ಟಿಯುಳ್ಳ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.
ಕೊಳ್ಳೇಗಾಲ ಮಾಜಿ ಶಾಸಕ ಎಸ್. ಜಯಣ್ಣ ಅವರ ನಿಧನಕ್ಕೂ ಭಾರತೀಶಂಕರ್ ಸಂತಾಪ ಸೂಚಿಸಿದ್ದಾರೆ.ನಿವೃತ್ತ ಐಎಫ್ಎಸ್ ಅಧಿಕಾರಿ ಎ.ಸಿ.ಲಕ್ಷ್ಮಣ್ ಸಂತಾಪಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ನಿವೃತ್ತ ಐಎಎಫ್ಎಸ್ ಅಧಿಕಾರಿ, ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕೃಷ್ಣ ಅವರು ಅತ್ಯಂತ ಜವಾಬ್ದಾರಿಯುತ, ಮುತ್ಸದ್ಧಿ ರಾಜಕಾರಣಿಯಾಗಿದ್ದರು. ಮಹಾರಾಜ ಕಾಲೇಜಿನ ಟೆನ್ನಿಸ್ ಕೋರ್ಟ್‌ನಿಂದ ಹಿಡಿದು ವಿದೇಶಾಂಗ ಸಚಿವಾಲಯದವರೆಗೂ ಸಾಗಿದ ಕೃಷ್ಣ ಅವರು ಅದೇ ವರ್ಚಸ್ಸು ಉಳಿಸಿಕೊಂಡಿದ್ದರು..ಶ್ರೀಗಂಧ ಬೆಳೆಯುವ ರೈತರನ್ನು ಗೌರವಿಸುವ ಮೂಲಕ ಕೃಷ್ಣ ಅವರ ಕನಸನ್ನು ನನಸು ಮಾಡಬೇಕು ಎಂದಿದ್ದಾರೆ.