ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಮಾಜಿ ಪ್ರಧಾನ ಮಂತ್ರಿಗಳಾದ ಡಾ, ಮನಮೋಹನ್ ಸಿಂಗ್ ಹಾಗೂ ಪತ್ರಕರ್ತ ಹಳೇ ಆಲೂರು ಸುರೇಶ್ ರವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸಂತಾಪ ಸೂಚಿಸಲಾಯಿತು.ನಂತರ ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ಜಯರಾಮ್ ಮಾತನಾಡಿ, ತಾಲೂಕಿನಲ್ಲಿ ಆಲೂರು ಮಿತ್ರ ಪತ್ರಿಕೆಯ ಸಂಪಾದಕರಾಗಿ ಹಾಗೂ ಸ್ಥಳೀಯ ಪತ್ರಿಕೆಯ ವರದಿಗಾರನಾಗಿ ತಮ್ಮ ಅನನ್ಯ ಸೇವೆ ಸಲ್ಲಿಸಿದ್ದರು. ಆದರೆ ಅನಾರೋಗ್ಯ ದಿಂದ ಬಳಲುತ್ತಿದ್ದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ತಾಲೂಕಿನಲ್ಲಿ ಉತ್ತಮ ಬರವಣಿಗೆಯ ಮೂಲಕ ಮಾಧ್ಯಮ ಬೆಳವಣಿಗೆಯ ಕೊಂಡಿಯಾಗಿದ್ದರು. ಪ್ರಾಮಾಣಿಕತೆಗೆ ಹೆಸರಾಗಿದ್ದರು. ಗ್ರಾಮೀಣ ಭಾಗದ ಒಬ್ಬ ವ್ಯಕ್ತಿಯೊಬ್ಬ ಪತ್ರಿಕೆಯ ಸಂಪಾದಕನಾಗಿ ಹಾಗೂ ತಮ್ಮ ಬರವಣಿಗೆಯ ಮೂಲಕ ನಮಗೆ ಮಾದರಿಯಾಗಿದ್ದವರು. ಮಾಧ್ಯಮ ಲೋಕಕ್ಕೆ, ತಾಲೂಕಿನಲ್ಲಿ ಎಲ್ಲರಿಗೂ ಪರಿಚಿತರಾಗಿದ್ದರು. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.
ಮಾಜಿ ಅಧ್ಯಕ್ಷ ನಟರಾಜು ನಾಕಲಗೂಡು ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತನಾಗಿ ತಾಲೂಕು ಸಂಘದಲ್ಲಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಹರಿತವಾದ ಲೇಖನ ಮೂಲಕ ಹೆಸರುವಾಸಿಯಾಗಿದ್ದವರು. ಕಳೆದ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಾವನ್ನಪ್ಪಿದ್ದಾರೆ. ಅವರ ನಿಧನ ನಮಗೆ ಹಾಗೂ ಸಂಘಕ್ಕೆ ನೋವು ತಂದಿದೆ ಎಂದು ಹೇಳಿ ಸಂತಾಪ ಸೂಚಿಸಿ ಮೌನಾಚರಣೆ ಮಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.ಮಾಜಿ ಅಧ್ಯಕ್ಷ ಎಂ, ಪಿ ಹರೀಶ್ ಮಾತಾನಾಡಿ, ಪತ್ರಕರ್ತರ ಸಂಘಟನೆಯಲ್ಲಿ ಅವರಿಗಿದ್ದ ಬದ್ಧತೆ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಸಂಘದ ಏಳಿಗೆಗೆ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದ ಸುರೇಶ್ ಅವರ ನಿಧನ ಸುದ್ದಿಮನೆಗೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಪ್ರದೀಪ್, ರುದ್ರಕುಮಾರ್, ಕಬೀರ್ ಅಹಮದ್, ಸತೀಶ್ ಇದ್ದರು.