ಸಾರಾಂಶ
Condolences through notes on death of SM Krishna
-ವಿಶಿಷ್ಟ ಕೊಡುಗೆ ನೀಡಿದ ಪ್ರಭಾವಿ, ಜನಮೆಚ್ಚಿದ ನಾಯಕ: ಚುಂಚಾದ್ರಿ ಮಹಿಳಾ ವೇದಿಕೆ ಸಂತಾಪ
-----ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಹಿರಿಯ ನಾಣ್ಯ, ನೋಟು ಹಾಗೂ ಅಂಚೆಚೀಟಿ ಸಂಗ್ರಹಗಾರ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ನಿಧನಕ್ಕೆ ವಿಶೇಷವಾಗಿ ೧೦ ರು. ಮುಖಬೆಲೆ ನೋಟು ಮೂಲಕ ಸಂತಾಪ ಸೂಚಿಸಿದ್ದಾರೆ.ಕೃಷ್ಣ ಅವರ ಜನ್ಮದಿನ ಹಾಗೂ ನಿಧನದ ದಿನಾಂಕ ಹೊಂದಿದ ೧೦ ರು. ಮುಖಬೆಲೆಯ ನೋಟುಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಗಣೇಶ್ ಅವರು ೫ ದಶಕ್ಕೂ ಹೆಚ್ಚು ಕಾಲದಿಂದ ನಾಣ್ಯ, ನೋಟು ಹಾಗೂ ಅಂಚೆ ಚೀಟಿ ಸಂಗ್ರಹ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಗಣ್ಯವ್ಯಕ್ತಿಗಳ ಹುಟ್ಟು, ನಿಧನ ಹೊಂದಿದ ದಿನ ಹಾಗೂ ಪ್ರಮುಖ ಐತಿಹಾಸಿಕ ಘಟನೆಗಳ ಸಂದರ್ಭದಲ್ಲಿ ನೋಟುಗಳ ಮೂಲಕ ಶುಭ ಹಾರೈಕೆ, ಸಂತಾಪ ಸೂಚಿಸುವ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ.
ಸಂತಾಪ:ಎಸ್.ಎಂ ಕೃಷ್ಣರವರ ನಿಧನಕ್ಕೆ ನಗರದ ಚುಂಚಾದ್ರಿ ಮಹಿಳಾ ವೇದಿಕೆ ಸಂತಾಪ ಸೂಚಿಸಿದೆ. ರಾಜ್ಯದ ವಿಧಾನಸಭೆ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲರಾಗಿ ಇನ್ನಿತರ ಅನೇಕ ಹುದ್ದೆಯನ್ನು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸಿ ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಒಕ್ಕಲಿಗರ ಜನಾಂಗದ ಪ್ರಭಾವಿ ಹಾಗೂ ಜನಮೆಚ್ಚಿದ ನಾಯಕ ಎಸ್.ಎಂ ಕೃಷ್ಣ ಅವರ ನಿಧನ ತುಂಬಲಾರದ ನಷ್ಟವನ್ನುಂಟು ಮಾಡಿದೆ.ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಹಾಗೂ ಕುಟುಂಬ ವರ್ಗಕ್ಕೆ , ಹಿತೈಷಿಗಳಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕುರುಣಿಸಲಿ ಎಂದು ವೇದಿಕೆ ಗೌರವಾಧ್ಯಕ್ಷೆ ಅನುರಾಧ ಪಟೇಲ್, ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವೆಂಕಟೇಶ್ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.