ಪ್ರವಾಹದ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಿ

| Published : Aug 08 2024, 01:40 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ ಘಟಪ್ರಭಾ ನದಿಯ ಪ್ರವಾಹದಿಂದ ಭಾಗಶಃ ಹಾನಿಯಾಗಿರುವ ರೈತರ ಬೆಳೆಗಳನ್ನು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಮೆಳವಂಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಶಾಸಕರು, ಈ ಪ್ರವಾಹ ಪೀಡಿತ ಸಮೀಕ್ಷೆಯಲ್ಲಿ ಅರ್ಹರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಘಟಪ್ರಭಾ ನದಿಯ ಪ್ರವಾಹದಿಂದ ಭಾಗಶಃ ಹಾನಿಯಾಗಿರುವ ರೈತರ ಬೆಳೆಗಳನ್ನು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಮೆಳವಂಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಶಾಸಕರು, ಈ ಪ್ರವಾಹ ಪೀಡಿತ ಸಮೀಕ್ಷೆಯಲ್ಲಿ ಅರ್ಹರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.ಘಟಪ್ರಭಾ ನದಿ ತೀರದ ಸುಮಾರು 30 ಗ್ರಾಮಗಳಿಗೆ ಪ್ರವಾಹ ಬಂದಿದ್ದರಿಂದ ರೈತರು ಮತ್ತು ಜನತೆಗೆ ತೊಂದರೆಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳಗಳು ನಾಶವಾಗಿವೆ. ನೀರು ನುಗ್ಗಿ ಮನೆಗಳು, ರಸ್ತೆ, ಸೇತುವೆಗಳು ಸಹ ಹಾಳಾಗಿವೆ. ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕ(ಟಿ.ಸಿ)ಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಸಂಬಂಧಿಸಿದ ಅಧಿಕಾರಿಗಳು ಯಾರ ಪ್ರಭಾವಕ್ಕೂ ಒಳಗಾಗದೇ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ಸಮೀಕ್ಷೆ ಕೈಗೊಳ್ಳಬೇಕು. ಪಿಡಿಒಗಳು, ಅಭಿಯಂತರರು ಜೊತೆಗೂಡಿ ಸಮೀಕ್ಷೆ ನಡೆಸಬೇಕು. ನೈಜ ಫಲಾನುಭವಿಗಳನ್ನು ಬಿಟ್ಟು ಬೇರೆ ಯಾರನ್ನಾದರೂ ಸೇರಿಸಿದರೆ ಆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮೂಡಲಗಿ ತಾಲೂಕಿನಲ್ಲಿ ಅಂದಾಜು 4440 ಹೆಕ್ಟೇರ್‌ ಹಾಗೂ ಗೋಕಾಕ ತಾಲೂಕಿನಲ್ಲಿ 3398 ಹೆಕ್ಟೇರ್‌ ಸೇರಿ ಒಟ್ಟು 7838 ಹೆಕ್ಟೇರ್‌ ಬೆಳೆ ನಾಶವಾಗಿದೆ. ಇದರಲ್ಲಿ ಕಬ್ಬು, ಗೋವಿನ ಜೋಳ, ಸೋಯಾಬೀನ್, ಹತ್ತಿ, ಹೆಸರು ಸೇರಿದೆ ಎಂದು ಹೇಳಿದರು.

ಗೋಕಾಕ ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ಮೂಡಲಗಿ ತಹಸೀಲ್ದಾರ್‌ ಮಹಾದೇವ ಸನ್ನಮುರಿ, ಗೋಕಾಕ ತಾಪಂ ಇಒ ಉದಯಕುಮಾರ ಕಾಂಬಳೆ, ಮೂಡಲಗಿ ಇಒ ಎಫ್.ಜಿ.ಚಿನ್ನನ್ನವರ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶಾಲೆಯ ಆವರಣದಲ್ಲಿ ಜಮಾಯಿಸಿದ್ದ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಉದ್ದೇಶಿಸಿ ಮಾತನಾಡಿ, ನಿಮ್ಮ ಬೇಡಿಕೆಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.---

ಪ್ರವಾಹದಲ್ಲಿ ಬೆಳೆಹಾನಿಯಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹17,500 ಪರಿಹಾರ ಪ್ರಕಟಿಸಿದೆ. ಜೊತೆಗೆ ನೀರು ನುಗ್ಗಿರುವ ಸಂತ್ರಸ್ತ ಕುಟುಂಬಗಳಿಗೆ ಎನ್‌ಡಿಆರ್‌ಎಫ್‌ನಿಂದ ತಲಾ ₹5 ಸಾವಿರ, ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆಗಳಿಗೆ ರಾಜ್ಯ ಸರ್ಕಾರ ಮತ್ತು ಎನ್‌ಡಿಆರ್‌ಎಫ್ ತಲಾ ₹ 1.20 ಲಕ್ಷ ಸೇರಿ ಒಟ್ಟು ₹2.40 ಲಕ್ಷ ಪರಿಹಾರ ನೀಡಲಾಗುತ್ತಿದೆ.

- ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಭಾವಿ