ಧರ್ಮಸ್ಥಳ ಪ್ರಕರಣ ಉನ್ನತ ಮಟ್ಟದ ತನಿಖೆ ಮಾಡಿ

| Published : Sep 05 2025, 01:00 AM IST

ಸಾರಾಂಶ

ಧರ್ಮಸ್ಥಳ ಹಿಂದೂ ಧಾರ್ಮಿಕ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಕ್ಷೇತ್ರದ ವಿರುದ್ಧ ಅವಹೇಳನ ಮಾಡಬಾರದು. ಅಪಪ್ರಚಾರ ಮಾಡಬಾರದು ಎಂಬುದು ಮಠಾಧೀಶರ ನಿಲುವಾಗಿದೆ ಎಂದು ಸಾಲೂರು ಮಠದ ಪೀಠಾಧಿಪತಿ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು

ಧರ್ಮಸ್ಥಳ ಹಿಂದೂ ಧಾರ್ಮಿಕ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಕ್ಷೇತ್ರದ ವಿರುದ್ಧ ಅವಹೇಳನ ಮಾಡಬಾರದು. ಅಪಪ್ರಚಾರ ಮಾಡಬಾರದು ಎಂಬುದು ಮಠಾಧೀಶರ ನಿಲುವಾಗಿದೆ ಎಂದು ಸಾಲೂರು ಮಠದ ಪೀಠಾಧಿಪತಿ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿ, ವಿವಿಧ ಮಠಾಧೀಶರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಪಾರ ಶ್ರದ್ಧಾಭಕ್ತಿ ನಂಬಿಕೆಯನ್ನು ಇರಿಸಿಕೊಂಡಿದ್ದು, ಇತ್ತೀಚಿನ ಕೆಲವು ಅನಪೇಕ್ಷಿತ ವಿದ್ಯಮಾನಗಳು ಭಕ್ತರ ಭಕ್ತಿ ಭಾವನೆಗಳಿಗೆ ಅಘಾತವನ್ನುಂಟುಮಾಡಿದೆ. ಧರ್ಮಸ್ಥಳ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೇ ಅನೇಕ ರಾಜ್ಯಗಳಲ್ಲಿ ತನ್ನದೇ ಆದ ಭಕ್ತ ಸಮೂಹವನ್ನು ಹೊಂದಿರುವ ಪುಣ್ಯಕ್ಷೇತ್ರ ಇಡೀ ಭಾರತದ ಒಂದು ಧಾರ್ಮಿಕ ಕ್ಷೇತ್ರದ ಮೇಲೆ ನಿರಂತರವಾಗಿ ವಿವಾದವನ್ನು ತರುತ್ತಿರುವುದು ಸಮಂಜಸವಲ್ಲ ಎಂದರು.

ಪ್ರಮುಖ ಧಾರ್ಮಿಕ ಸಂಸ್ಥೆಗಳ ಘನತೆಗೆ ಧಕ್ಕೆ ತರಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಇದರ ಬಗ್ಗೆ ತನಿಖೆ ನಡೆಸಬೇಕು. ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರ ತಡೆದು, ಕ್ಷೇತ್ರದ ಪಾವಿತ್ರ್ಯ ರಕ್ಷಿಸಬೇಕು .ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಇತರ ಆರೋಪಗಳ ಕುರಿತು ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಾಲೂರು ಶ್ರೀ ಒತ್ತಾಯಿಸಿದರು.