ಕನ್ನಡಪ್ರಭ ವಾರ್ತೆ ಬೆಳಗಾವಿ ಇ-ಸ್ವತ್ತು ಸರ್ವೇಯನ್ನು ರೋವರ್ ಸಿಸ್ಟಮ್‌ಗಳ ಮೂಲಕ ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಇ-ಸ್ವತ್ತು ಅಭಿಯಾನ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇ-ಸ್ವತ್ತು ಸರ್ವೇಯನ್ನು ರೋವರ್ ಸಿಸ್ಟಮ್‌ಗಳ ಮೂಲಕ ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಇ-ಸ್ವತ್ತು ಅಭಿಯಾನ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಭೂದಾಖಲೆಗಳ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಸಂಬಂಧಿಸಿದ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇ-ಸ್ವತ್ತು ಮಾದರಿ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮದ ಒಳಗಿನ ಸಾರ್ವಜನಿಕರ ಆಸ್ತಿಗಳ ಸರ್ವೇ ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಭೂದಾಖಲೆಗಳ ಇಲಾಖೆಯವರು ಮಾದರಿಗಾಗಿ ಆಯ್ಕೆ ಮಾಡಿದ ಚನ್ನಮ್ಮನ ಕಿತ್ತೂರು ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಯನ್ನು 15 ದಿನಗಳೊಳಗಾಗಿ ಗುರುತಿಸಬೇಕು. ಇದಕ್ಕಾಗಿ ಕ್ವಾಂಟಮ್ ಜಿ.ಐ.ಎಸ್. ಸಾಪ್ಟವೇರ್ ಹಾಗೂ ರೋವರ್ ಸಿಸ್ಟಮ್ ಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮ ಠಾಣಾ ವ್ಯಾಪ್ತಿಯನ್ನು ಗುರುತಿಸಿ ಗ್ರಾಮ ಠಾಣಾ ಒಳಗಿನ ಆಸ್ತಿಗಳ ಸರ್ವೇಯಿಂದ ಬಂದ ಮಾಹಿತಿಯ ಕರಡು ನಕ್ಷೆ ಸಿದ್ಧಪಡಿಸಬೇಕು. ತಯಾರಿಸಿದ ಕರಡು ನಕ್ಷೆಗೆ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಬಂದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅಂತಿಮ ನಕ್ಷೆಗೆ ಅನುಮತಿ ನೀಡಬೇಕು ಎಂದು ನಿರ್ದೇಶಿಸಿದರು.

ಆಕ್ಷೇಪಣೆ ಇಲ್ಲದ ಆಸ್ತಿಗಳನ್ನು ಹಸಿರು ಬಣ್ಣದಿಂದ, ಆಕ್ಷೇಪಣೆ ಬಂದ ಆಸ್ತಿಗಳನ್ನು ಹಳದಿ ಬಣ್ಣದಿಂದ ಹಾಗೂ ಅತಿಕ್ರಮಣಗೊಂಡ ಆಸ್ತಿಗಳನ್ನು ಕೆಂಪು ಬಣ್ಣದಿಂದ ಗುರುತಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ವಿಜಯಕುಮಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಘೋರ್ಪಡೆ, ಚನ್ನಮ್ಮನ ಕಿತ್ತೂರು ತಾಪಂ ಇಒ ನಿಂಗಪ್ಪ ಮಸಳಿ, ಸಹಾಯಕ ನಿರ್ದೇಶಕ (ಪಂರಾ) ವಿಜಯ ಪಾಟೀಲ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.