ಸಾರಾಂಶ
೧೯೮೬ರಿಂದ ೨೦೧೧ರ ಅವಧಿಯಲ್ಲಿ ಗೇರು ಉತ್ಪಾದನೆ ಹೆಚ್ಚಿಸಲು, ಸೊಳ್ಳೆ ನಿಯಂತ್ರಕ್ಕಾಗಿ ಗೇರು ಅಭಿವೃದ್ಧಿ ನಿಗಮ ಬಳಕೆ ಮಾಡಿದ ಕ್ರಿಮಿನಾಶಕದಿಂದ ಸಾಕಷ್ಟು ಜನರು ಇದುವರೆಗೂ ವಿವಿಧ ರೀತಿಯ ಅಂಗಾಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ.
ಕಾರವಾರ:
ಜಿಲ್ಲೆಯಲ್ಲಿ ಎಂಡೋಸೆಲ್ಫಾನ್ ತೊಂದರೆಗೊಳಗಾದವರ ಸರ್ವೇಯಾಗಬೇಕು. ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಸರ್ಕಾರದಿಂದ ಒದಗಿಸಬೇಕು ಎಂದು ಶಿರಸಿ ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಆಗ್ರಹಿಸಿದರು.ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೯೮೬ರಿಂದ ೨೦೧೧ರ ಅವಧಿಯಲ್ಲಿ ಗೇರು ಉತ್ಪಾದನೆ ಹೆಚ್ಚಿಸಲು, ಸೊಳ್ಳೆ ನಿಯಂತ್ರಕ್ಕಾಗಿ ಗೇರು ಅಭಿವೃದ್ಧಿ ನಿಗಮ ಬಳಕೆ ಮಾಡಿದ ಕ್ರಿಮಿನಾಶಕದಿಂದ ಸಾಕಷ್ಟು ಜನರು ಇದುವರೆಗೂ ವಿವಿಧ ರೀತಿಯ ಅಂಗಾಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಎಂಡೋಸಲ್ಫಾನ್ ಬಾಧೆಗೊಳಗಾದವರಿಗೆ ವಿಶೇಷ ಕಾಳಜಿ ವಹಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶಿಸಿದ್ದರೂ ಈ ಬಗ್ಗೆ ಯಾರು ಗಮನ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಬೇಡಿಕೆಗಳು:ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಎಂಡೋಸಲ್ಫಾನ್ ಬಾಧಿತರ ಸಭೆ ನಡೆಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಳಕೆಯಾಗದೇ ಇರುವ ಕ್ರಿಮಿನಾಶಕವನ್ನು ಎಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ತನಿಖೆಯಾಗಬೇಕು. ಈ ರೋಗಕ್ಕೆ ತುತ್ತಾದವರ ಮರು ಸಮೀಕ್ಷೆ ನಡೆಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲೇ ಚಿಕಿತ್ಸಾ ವ್ಯವಸ್ಥೆ ಮಾಡಬೇಕು. ಬಾಧಿತರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಇಲಾಖಾವಾರು ಗುರಿ ನಿಗದಿ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಕುಂದು-ಕೊರತೆಗಳ ಸಮಿತಿ ಇರುವಂತೆ ತಾಲೂಕು ಮಟ್ಟದಲ್ಲೂ ರಚಿಸಬೇಕು ಎಂದು ಆಗ್ರಹಿಸಿದರು.ಕಳೆದ ೫-೬ ವರ್ಷಗಳಿಂದ ಎಂಡೋಸಲ್ಫಾನ್ ಜಿಲ್ಲಾಮಟ್ಟದಲ್ಲಿ ಕುಂದು-ಕೊರತೆಗಳ ಸಮಿತಿ ಸಭೆ ಆಗಿರಲ್ಲ. ಸಚಿವ ಮಂಕಾಳು ವೈದ್ಯ ಮುತುವರ್ಜಿ ವಹಿಸಿ ಈಚೆಗೆ ಭಟ್ಕಳದಲ್ಲಿ ಸ್ಕ್ರೀನಿಂಗ್ ಕ್ಯಾಂಪ್ ಮಾಡಿಸಿದ್ದಾರೆ. ಅದೇ ರೀತಿ ಎಂಡೋಸಲ್ಫಾನ್ ಬಾಧಿತರ ಸಮಗ್ರ ಏಳ್ಗೆಗೂ ಮುತುವರ್ಜಿ ವಹಿಸಬೇಕು. ಅವರಿಗೆ ಅಗತ್ಯವಿರುವ ಸೌಲಭ್ಯ ನೀಡಲು ಪ್ರಯತ್ನಿಸಬೇಕು ಎಂದರು.ಎಂಡೋಸಲ್ಫಾನ್ ಕಾರ್ಯಕ್ರಮಗಳ ಮೇಲ್ವಿಚಾರಕಿ ಮಾಲತಿ ಕರ್ಕಿ, ಸ್ಕೋಡ್‌ವೆಸ್ ಯೋಜನಾ ವಿಭಾಗದ ಮುಖ್ಯಸ್ಥೆ ವರ್ಷ ಹೆಗಡೆ, ಯೋಜನಾ ಸಂಯೋಜಕ ಪ್ರಸನ್ನಕುಮಾರ ಹೆಗ್ಗಡೆ, ವಿಜಯ ಕಾರವಾರ ಇದ್ದರು.