ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಸರಣಿ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಮೂಲಕ ಪಾರದರ್ಶಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ , (ಮಾರ್ಕ್ಸ್ ವಾದಿ ಲೆನಿನ್ ವಾದಿ) ಕೊಡಗು ಜಿಲ್ಲಾ ಸಮಿತಿಯ ಕಾರ್ಯಕರ್ತರು ಸರ್ಕಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು. ಕುಶಾಲನಗರ ತಾಲೂಕು ಕಚೇರಿ ಮುಂಭಾಗ ಸಮಿತಿಯ ರಾಜ್ಯ ಸದಸ್ಯರಾದ ಡಿ ಎಸ್ ನಿರ್ವಾಣಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ತಕ್ಷಣ ತನಿಖೆ ನಡೆಸಿ ಕೊಲೆಗಡುಕರನ್ನು ಪತ್ತೆ ಹಚ್ಚಬೇಕು, ಧರ್ಮಸ್ಥಳ ಸಂಸ್ಥೆಯ ಹೆಸರಿನಲ್ಲಿ ಆಕ್ರಮಿಸಿಕೊಂಡಿರುವ ಬಡವರ ಹಾಗೂ ಸರ್ಕಾರದ ಸಾವಿರಾರು ಎಕ್ರೆ ಭೂಮಿಯನ್ನು ಸರ್ಕಾರ ಹಿಂಪಡೆದುಕೊಳ್ಳಬೇಕು. ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಹೆಣ್ಣುಮಕ್ಕಳ ಕುಟುಂಬಗಳನ್ನು ಪತ್ತೆಹಚ್ಚಿ ಸೂಕ್ತ ಪರಿಹಾರ ನೀಡಬೇಕು, ಕ್ಷೇತ್ರ ಧರ್ಮಸ್ಥಳದ ಮೇಲಿನ ಜನರ ನಂಬಿಕೆಯನ್ನು ಪಾವಿತ್ರ್ಯತೆಯನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಕುಶಾಲನಗರ ತಾಲೂಕು ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೈ ಎಂ ಸುರೇಶ್, ಪ್ರಮುಖರಾದ ಜೆ ಎಂ ಸುರೇಶ್, ಸಾವಿತ್ರಿ, ಮುತ್ತಣ್ಣ, ಜವರಯ್ಯ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ ಬಿ ರಾಜು ಮತ್ತಿತರರು ಇದ್ದರು.