ಅತಿಥಿ ಶಿಕ್ಷಕರ ನೇಮಕಕ್ಕೆ ನಡೆತೆ ಪ್ರಮಾಣ ಪತ್ರ ಕಡ್ಡಾಯ

| Published : Aug 12 2025, 12:30 AM IST

ಸಾರಾಂಶ

ಕೆಲವೆಡೆ ಅತಿಥಿ ಶಿಕ್ಷಕರಿಂದ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿವೆ. ಇಂತಹ ಪ್ರಕರಣ ಮರುಕಳಿಸಬಾರದೆಂದರೆ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಅತಿಥಿ ಶಿಕ್ಷಕರ ನಡತೆ ಪ್ರಮಾಣ ಪತ್ರ ಪಡೆಯಬೇಕು.

ಯಲಬುರ್ಗಾ:

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಪೊಲೀಸ್ ಇಲಾಖೆಯಿಂದ ನಡತೆ ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು. ರಾಜ್ಯದ ವಿವಿಧೆಡೆ ಪರಿಶೀಲನೆ ಮಾಡಿದಾಗ ರೌಡಿಶೀಟರ್‌ಗಳು ಕೂಡ ಅತಿಥಿ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಹಾಗೂ ಶಿಕ್ಷಣ ಕಾರ್ಯಪಡೆಯ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇನ್ನೂ ಕೆಲವೆಡೆ ಅತಿಥಿ ಶಿಕ್ಷಕರಿಂದ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿವೆ. ಇಂತಹ ಪ್ರಕರಣ ಮರುಕಳಿಸಬಾರದೆಂದರೆ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಅತಿಥಿ ಶಿಕ್ಷಕರ ನಡತೆ ಪ್ರಮಾಣ ಪತ್ರ ಪಡೆಯಬೇಕು ಎಂದು ಆಯಾ ಶಾಲಾ ಮುಖ್ಯಶಿಕ್ಷಕರಿಗೆ ಸೂಚಿಸಿದರು.

ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರ ಮತ್ತು ಕಂದಾಯ ಇಲಾಖೆ ಕಚೇರಿಗಳ ಗೋಡೆ ಮೇಲೆ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ನ್ನು ಕಡ್ಡಾಯವಾಗಿ ಬರೆಯಿಸುವ ಜತೆಗೆ ಎಲ್ಲ ಶಾಲೆಗಳಲ್ಲಿ ಸಲಹಾ ಪೆಟ್ಟಿಗೆ ಅಳವಡಿಸಲು ಶಿಕ್ಷಕರು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಿ:

ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಶಾಲೆಗಳ ಮೂಲ ಸೌಕರ್ಯ ಕುರಿತು ಚರ್ಚೆಯಾದ ಸಮಸ್ಯೆಗಳ ಪರಿಹಾರಕ್ಕೆ ಗ್ರಾಪಂ ಕ್ರಮ ವಹಿಸಬೇಕು. ಶಾಲೆಗಳಿಗೆ ಶೌಚಾಲಯ, ಅಡುಗೆ ಕೊಠಡಿ, ಕುಡಿಯುವ ನೀರು, ಕಾಂಪೌಂಡ್ ಸೇರಿ ಇನ್ನಿತರ ಅವಶ್ಯಕ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಹೊರಗುಳಿದ ಮಕ್ಕಳ ಕರೆ ತನ್ನಿ:

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರುವ ಕೆಲಸ ಶಿಕ್ಷಕರು ಮತ್ತು ಗ್ರಾಪಂ ಆಡಳಿತ ಮಂಡಳಿಯಿಂದಾಗಬೇಕು. ಪ್ರತಿ ಶಾಲೆಯ ಮುಖ್ಯಶಿಕ್ಷಕರು ಬಾಲ್ಯ ವಿವಾಹ ನಿಷೇಧಕ್ಕೆ ಕೈಜೋಡಿಸಬೇಕು. ಶಾಲಾ-ಕಾಲೇಜಿನಿಂದ ಹೊರಗುಳಿದ ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುವ ಸಾಧ್ಯತೆ ಇದ್ದು ಅವರನ್ನು ಗಮನಿಸುವ ಮೂಲಕ ಶಾಲೆಗೆ ಕರೆತರಬೇಕು. ನಿರಂತರವಾಗಿ ಶಾಲೆಗೆ ಗೈರಾಗುವ ವಿದ್ಯಾರ್ಥಿಗಳ ಹಾಜರಾತಿ ಕೈಬಿಡಬೇಕು ಎಂದ ರಾಮತ್ನಾಳ, ಬಿಸಿಯೂಟಕ್ಕಾಗಿ ಬಳಕೆಯಾಗುವ ತೊಗರಿ ಬೇಳೆ ತೀವ್ರ ಕಳಪೆ ಮಟ್ಟದ್ದಾಗಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಹುದು. ಇದು ರಾಜ್ಯಾದ್ಯಂತ ಸಮಸ್ಯೆಯಾಗಿದೆ ಎಂದರು.

ಗೂಡ್ಸ್ ವಾಹನ ಬಳಸಬೇಡಿ:

ಶಾಲಾ ಹಂತದಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ಶಿಕ್ಷಕರು ವಿದ್ಯಾರ್ಥಿಗಳನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯಬಾರದು. ಸಾಧ್ಯವಾದಷ್ಟು ಪ್ಯಾಸೆಂಜರ್ ವಾಹನ ಬಳಸಬೇಕು. ಗ್ರಾಪಂಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಹಾಗೂ ಕಾರ್ಯಪಡೆ ಸಮಿತಿ ರಚನೆ ಮಾಡದಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ರಾಮತ್ನಾಳ ತಿಳಿಸಿದರು.

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿ ತೆರವುಗೊಳಿಸದೆ ಇರುವುದು ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸಲು ಕ್ರಮವಹಿಸಬೇಕು ಎಂದು ಸಿಆರ್‌ಪಿ ಹುಸೇನ ಭಾಗವಾನ ಸಭೆಯ ಗಮನಕ್ಕೆ ತಂದರು.

ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ತಮ್ಮ ಇಲಾಖೆಯ ಪ್ರಗತಿ ವರದಿ ಮಂಡಿಸಿದರು. ಈ ವೇಳೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿ ಮಹಾಂತೇಶ ಪೂಜಾರ, ಶಿವಲೀಲಾ ಹೊನ್ನೂರ, ಪಿಡಿಒ ಸೋಮಪ್ಪ ಪೂಜಾರ ಇದ್ದರು.