ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಪರೀಕ್ಷೆ ನಡೆಸಿ: ಜಿಪಂ ಸಿಇಒ

| Published : Aug 23 2024, 01:02 AM IST

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಪರೀಕ್ಷೆ ನಡೆಸಿ: ಜಿಪಂ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲೆಯ ಎಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಇಟಿ,ನೀಟ್ ಅಭ್ಯಾಸ ಪರೀಕ್ಷೆ ನಡೆಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅಧಿಕಾರಿಗಳಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯ ಎಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಇಟಿ,ನೀಟ್ ಅಭ್ಯಾಸ ಪರೀಕ್ಷೆ ನಡೆಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅಧಿಕಾರಿಗಳಗೆ ಸೂಚನೆ ನೀಡಿದರು.

ಗುರುವಾರ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ನಡೆದ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಿಇಟಿ/ನೀಟ್ ಪರೀಕ್ಷೆಗಳ ಪೂರ್ವ ತಯಾರಿಯಾಗಿ, ಅಭ್ಯಾಸ ಪರೀಕ್ಷೆಗಳನ್ನು ನಡೆಸಲು ಸರ್ಕಾರಿ ಕಾಲೇಜುಗಳಲ್ಲಿರುವ ಸಂಪನ್ಮೂಲ ಉಪನ್ಯಾಸಕರನ್ನು ಬಳಸಿಕೊಂಡು, ಸಮಿತಿ ರಚನೆ ಮಾಡಿ ಕೆಇಎ ನಡೆಸುವ ಸಿಇಟಿ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಪ್ರತಿ ತಿಂಗಳಿನ ಎರಡನೆ ಶನಿವಾರ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿ ತಿಂಗಳ ನಾಲ್ಕನೇ ಶನಿವಾರ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಬೆಳಗಾವಿ ಹಾಗೂ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ವಿಭಾಗದ ಉಪನಿರ್ದೇಶಕರಿಗೆ ಸೂಚಿಸಿದರು.

ಈಗಾಗಲೇ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ನಾಲ್ಕು ಸಮಿತಿ ರಚಿಸಿದ್ದು, ಅವುಗಳಿಂದ ಸಿಇಟಿ/ನೀಟ್ ಅಭ್ಯಾಸ ಪರೀಕ್ಷೆಗಳನ್ನು ವ್ಯವಸ್ಥಿತ ರೂಪದಲ್ಲಿ ನಡೆಸುವುದು. ಮೊದಲನೆ ಸಮಿತಿ- ಶೈಕ್ಷಣಿಕ ಸಮಿತಿ, ಪ್ರಶ್ನೆ ಪತ್ರಿಕೆ ಸಿದ್ದಪಡಿಸುವುದು ಹಾಗೂ ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಮಾಡುವುದು, ಎರಡನೆ ಸಮಿತಿ-ಆಡಳಿತ ಸಮಿತಿ, ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸುವುದು. ಮೂರನೆ ಸಮಿತಿ-ಒಎಂಆರ್ ಸ್ಕ್ಯಾನಿಂಗ್ ಸಮಿತಿ- ಒಎಂ ಆರ್ ಸ್ಕ್ಯಾನಿಂಗ್ ಕಾರ್ಯನಿರ್ವಹಣೆ, ಕಾಲೇಜುವಾರು ಫಲಿತಾಂಶ ಪ್ರಕಟಿಸುವುದು. ನಾಲ್ಕನೆ ಸಮಿತಿ -ಸಮನ್ವಯ ಸಮಿತಿ-ಅವಳಿ ಜಿಲ್ಲೆಗಳ ಪರೀಕ್ಷಾ ಕಾರ್ಯವನ್ನು ಸಮನ್ವಯಗೊಳಿಸುವುದು. ಆ.24 ರಂದು ಶನಿವಾರ ದ್ವೀತಿಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಅಭ್ಯಾಸ ಪರೀಕ್ಷೆಯನ್ನು ಕೆಇಎ ಯ ಎಸ್ಒಪಿ ನಿಯಮದಡಿಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ಏಕಕಾಲದಲ್ಲಿ ಕಡ್ಡಾಯವಾಗಿ ನಡೆಸುವುದರ ಜೊತೆಗೆ ಪರೀಕ್ಷಾ ಪಾವಿತ್ರ್ಯತೆ ಮತ್ತು ಗೌಪ್ಯತೆ ಕಾಪಾಡಿಕೊಳ್ಳಲು ಸೂಚಿಸಿದರು.

ಸಭೆಯಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಉಪನಿರ್ದೇಶಕ ಎಂ.ಎಂ ಕಾಂಬಳೆ (ಬೆಳಗಾವಿ), ಉಪನಿರ್ದೇಶಕ ಪಿ.ಐ.ಭಂಡಾರೆ (ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ), ಶೈಕ್ಷಣಿಕ ಸಮಿತಿ ಸದಸ್ಯ ಎಫ್.ಎಂ. ಕಾಪ್ಸೇ, ಆಡಳಿತ ಸಮಿತಿಯ ಸದಸ್ಯ ಬಿ.ವೈ. ಹನ್ನೂರ, ಒಎಂ ಆರ್ ಸ್ಕ್ಯಾನಿಂಗ್‌ ಸಮಿತಿಯ ಸದಸ್ಯ ಸಚಿನ್ ಹಾಗೂ ಸಮೀರ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಭ್ಯಾಸ ಮಾಡುವ ವಿಧ್ಯಾರ್ಥಿಗಳು ಪ್ರತಿಭಾವಂತ ರಾಗಿರುತ್ತಾರೆ. ಸಿಇಟಿ/ನೀಟ್ ಮಾರ್ಗದರ್ಶನದ ನೀಡುವುದರ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಈ ಪರೀಕ್ಷೆಗಳಿಂದ ವಿಧ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದರ ಜೊತೆಗೆ ಮುಂಬರುವ ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಎದುರಿಸಲು ಸಹಕಾರಿಯಾಗಲಿದೆ.

-ರಾಹುಲ್ ಶಿಂಧೆ ಜಿಪಂ ಸಿಇಒ