ಸಾರಾಂಶ
- ಹರಿಹರ ತಾಲೂಕು ಶಿಕ್ಷಕರ ಸಹಕಾರ ಸಂಘ ವಾರ್ಷಿಕ ಸಭೆ- - - ಕನ್ನಡಪ್ರಭ ವಾರ್ತೆ ಹರಿಹರ
ಶಿಕ್ಷಕರ ಸಹಕಾರದಿಂದ ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ. ಶಿಕ್ಷಕರಿಂದ ಶಿಕ್ಷಕರಿಗಾಗಿ ಇರುವ ಸಹಕಾರ ಸಂಘದ ಸದುಪಯೋಗ ಎಲ್ಲ ಶಿಕ್ಷಕರಿಗೂ ಸಿಗುತ್ತಿರುವುದು ಸಂತೋಷಕರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ಹೇಳಿದರು.ನಗರದ ಗುರು ಭವನದಲ್ಲಿ ಸೋಮವಾರ ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಪತ್ತಿನ ಸಹಕಾರಿ ಸಂಘ ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕಾದರೆ ಎಲ್ಲ ಷೇರುದಾರ ಶಿಕ್ಷಕರು ಪತ್ತಿನ ಸಹಕಾರಿ ಸಂಘದಲ್ಲಿ ನಿರಂತರ ವ್ಯವಹಾರವನ್ನು ಮಾಡಬೇಕು. ಆ ಮೂಲಕ ಶಿಕ್ಷಕರು ತಮ್ಮ ಆರ್ಥಿಕ ಅಗತ್ಯತೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದರು.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ ಪ್ಯಾಟಿ ಮಾತನಾಡಿ, 2000ನೇ ವರ್ಷದಲ್ಲಿ ಕನಿಷ್ಟ ಮೊತ್ತದಲ್ಲಿ ಪ್ರಾರಂಭವಾದ ಸಂಘವು 2023-24 ನೇ ಸಾಲಿನಲ್ಲಿ ರೂ.5.80 ಕೋಟಿ ವ್ಯವಹಾರ ಮಾಡಿದೆ. ಇದೆಲ್ಲ ಸಾಧ್ಯವಾಗಿರುವುದು ಷೇರುದಾರ ಶಿಕ್ಷಕರ ಸಹಕಾರದಿಂದ. ಇನ್ನು ಮುಂದೆ ಷೇರುದಾರ ಶಿಕ್ಷಕರ ಮರಣೋತ್ತರ ನಿಧಿಯನ್ನು 5 ಸಾವಿರದಿಂದ ರೂ.10 ಸಾವಿರಕ್ಕೆ ಹಾಗೂ ಸಾಲ ಸೌಲಭ್ಯವನ್ನು 2 ಲಕ್ಷದಿಂದ 3 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದರು.
ಸಂಘದ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಬಿ. ಎನ್. ವೀರಪ್ಪ ಸಹಕಾರ ಸಂಘ ಬೆಳೆದು ಬಂದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಷೇರುದಾರ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಮೊಹಮ್ಮದ್ ಅಸ್ಲಂ, ಅಧೀಕ್ಷಕ ಸತೀಶ್, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕೆ.ಬೀರಪ್ಪ, ಕಾರ್ಯದರ್ಶಿ ವೈ.ಗದಿಗೆಪ್ಪ ಹಳೆಮನೆ, ಸಂಘದ ಉಪಾಧ್ಯಕ್ಷೆ ಎಸ್. ಸುನೀತಾ ಹಾಗೂ ನಿರ್ದೇಶಕರು ಷೇರುದಾರ ಶಿಕ್ಷಕರು ಭಾಗವಹಿಸಿದ್ದರು.
- - - -ಫೋಟೋ:ಹರಿಹರದಲ್ಲಿ ಸೋಮವಾರ ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಬಿಇಒ ಡಿ.ದುರುಗಪ್ಪ ಉದ್ಘಾಟಿಸಿದರು.