ಸಾರಾಂಶ
ಕೊಪ್ಪಳ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಅಂದಾಜು ಸಮೀಕ್ಷೆಯು ನಿಯಮಾನುಸಾರ ಅಚ್ಚುಕಟ್ಟಾಗಿ ನಡೆಯುವಂತೆ ವಿವಿಧ ಇಲಾಖೆಗಳ ಮೂಲ ಕಾರ್ಯಕರ್ತರು, ಮೇಲ್ವಿಚಾರಕರು ಸೇರಿದಂತೆ ಪ್ರತಿಯೊಬ್ಬರು ಶ್ರದ್ಧೆಯಿಂದ ಕಾರ್ಯ ಪ್ರವೃತ್ತರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಸಂಖ್ಯಿಕ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಅಂದಾಜು ಸಮೀಕ್ಷೆ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ವತಃ ಮೂಲ ಕಾರ್ಯಕರ್ತರೇ ಹೋಗಿ ಸಮೀಕ್ಷೆ ಮಾಡಬೇಕು. ಕಾರ್ಯಕರ್ತರು, ರೈತರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಬೆಳೆ ಕಟಾವು ಸಮೀಕ್ಷೆಯು ನಮಗಷ್ಟೆ ಅಲ್ಲದೇ ದೇಶ, ರಾಜ್ಯಕ್ಕೆ ಬಹಳ ಅನುಕೂಲವಾಗಿದೆ. ಇದರಿಂದ ಯಾವ ಯಾವ ಬೆಳೆಗೆ ಹೆಚ್ಚು ಒತ್ತು ಕೊಡಬಹುದು ಎನ್ನುವುದು ತಿಳಿಯುತ್ತದೆ. ಬೆಳೆಗಳಿಗೆ ಸೂಕ್ತವಾದ ಗೊಬ್ಬರ ಒದಗಿಸಲು ಅನುಕೂಲವಾಗುತ್ತದೆ. ಜನಗಣತಿ ತರಹವೇ ಬೆಳೆ ಸಮೀಕ್ಷೆ ಮಾಡಬೇಕು. ಪ್ರತಿಯೊಬ್ಬರೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸಮೀಕ್ಷೆ ಮಾಡಿ ಎಂದು ಹೇಳಿದರು.ಕೃಷಿ ಇಲಾಖೆಯ ಉಪನಿರ್ದೇಶಕರಾದ ಸಹದೇವ ಯರಗುಪ್ಪ ಮಾತನಾಡಿ, ಬೆಳೆ ಕಟಾವ್ ಸಮೀಕ್ಷೆಯಿಂದ ರೈತರು ಆರ್ಥಿಕವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇಲಾಖಾವಾರು ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಮೂಲಕಾರ್ಯಕರ್ತರು ಮೊಬೈಲ್‌ಗಳ ಮೂಲಕ ಸಮೀಕ್ಷೆ ಮಾಡಬಹುದು ಎಂದು ತಿಳಿಸಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಾದ ಸುಧಾಕರ ಮಾನೆ ಮಾತನಾಡಿ, ಬೆಳೆ ಅಂದಾಜು ಸಮೀಕ್ಷಾ ಕಾರ್ಯಕ್ಕೆ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮೂಲ ಕಾರ್ಯಕರ್ತರಾಗಿರುತ್ತಾರೆ. ಲಭ್ಯವಿರುವ ಇಲಾಖಾವಾರು ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳನ್ನು ಮೇಲ್ವಿಚಾರಣಾಧಿಕಾರಿ ಎಂದು ನೇಮಕ ಮಾಡಲಾಗಿದ್ದು, ಈ ಬಾರಿ ಕಡ್ಡಾಯವಾಗಿ ಕಟಾವಿನ ಸಂದರ್ಭದಲ್ಲಿ ಮೂಲ ಕಾರ್ಯಕರ್ತರು ಬೆಳೆ ಸಮೀಕ್ಷೆ ತೆಗೆದುಕೊಂಡಿದ್ದಾರೆಯೇ ಎಂದು ಪರಿಶೀಲಿಸಬೇಕು. ಬೆಳೆವಿಮೆ ತುಂಬಿದ ಕನಿಷ್ಠ ಮೂವರು ರೈತರನ್ನು ಸಮೀಕ್ಷೆಗೆ ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು ಎಂದರು.ಬಳ್ಳಾರಿ ಜಿಲ್ಲೆಯ ಜಿಲ್ಲಾ ಸಂಖ್ಯಾ ಸಂಗ್ರಹಣಧಿಕಾರಿಗಳಾದ ರಾಕೇಶ್ ಅವರು ಕ್ರಾಪ್ ಕಟ್ಟಿಂಗ್ ಎಕ್ಸ್‌ಪಿರಿಮೆಂಟ್ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಎಲ್ಲ ತಾಲೂಕಿನ ತಹಸೀಲ್ದಾರರು, ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ಸೇರಿದಂತೆ ಮೂಲ ಕಾರ್ಯಕರ್ತರು ಉಪಸ್ಥಿತರಿದ್ದರು.