ಸಾರಾಂಶ
ಗದಗ: ಡಿ. 29ರಂದು ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಹಾಗೂ ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗಾಗಿ ಪೂರ್ವಭಾವಿ ಮರುಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಯಾವುದೇ ರೀತಿಯ ಲೋಪ-ದೋಷಗಳಿಗೆ ಆಸ್ಪದ ನೀಡದಂತೆ ಜರುಗಿಸಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಜಿಪಂ ವಿಡಿಯೋ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ಡಿ. 29ರಂದು ಪರೀಕ್ಷೆಗಳು ಜರುಗುತ್ತಿದ್ದು, ಸುಗಮವಾಗಿ ನಡೆಸಲು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು, ಸ್ಥಳೀಯ ನಿರೀಕ್ಷಣಾಧಿಕಾರಿಯನ್ನು, ಮಾರ್ಗಾಧಿಕಾರಿಗಳನ್ನು ಮತ್ತು ತ್ರಿ-ಸದಸ್ಯ ಸಮಿತಿ ನೇಮಿಸಲಾಗಿದೆ ಎಂದರು. ಚಲನವಲನ ವೈಕಲ್ಯವುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗಳಿಗೆ ತೆರಳಲು ಅನುಕೂಲವಾಗುವಂತೆ ವೀಲ್ ಚೇರ್, ಇಳಿಜಾರು ರ‍್ಯಾಂಪ್ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದರು.ವಸ್ತ್ರ ಸಂಹಿತೆ: ಶೂ, ಸಾಕ್ಸ್‌ಗಳನ್ನು ಧರಿಸಲು ಅವಕಾಶವಿಲ್ಲ. ಸಾಧಾರಣ ಚಪ್ಪಲಿಯನ್ನು ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ತುಂಬುತೋಳಿನ ಶರ್ಟ್ ಮತ್ತು ಯಾವುದೇ ಆಭರಣಗಳನ್ನು ಮೆಟಲ್ ಮತ್ತು ನಾನ್‌ಮೆಟಲ್ (ಮಂಗಳಸೂತ್ರ ಹಾಗೂ ಕಾಲುಂಗುರಗಳನ್ನು ಹೊರತುಪಡಿಸಿ) ಪುಲ್ಲೋವರ್ಸ್, ಜಾಕೆಟ್, ಸ್ವೆಟರ್‌ಗಳನ್ನು ಧರಿಸಿ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್ ಮಾಸ್ಕ್ ಅನ್ನು ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುಮತಿ ಇಲ್ಲ. ಕರ್ನಾಟಕ ಲೋಕಸೇವಾ ಆಯೋಗವು ನಿಗದಿಪಡಿಸಿರುವ ಸೂಚನೆಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಡಿ. 29ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ಮಧ್ಯಾಹ್ನ 2ರಿಂದ 4ರ ವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗಾಗಿ ಪೂರ್ವಭಾವಿ ಮರುಪರೀಕ್ಷೆ ಜರುಗಲಿದ್ದು, ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5440 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗುವಂತೆ ಸಕಲ ಸಿದ್ಧತೆಗೆ ಕ್ರಮ ವಹಿಸಲಾಗಿದೆ ಎಂದರು.ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ., ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪರೀಕ್ಷಾ ಕೇಂದ್ರಗಳ ವಿವರ: ನಗರದ ಕೆಎಲ್ಇ ಸೊಸೈಟಿ ಜೆ.ಟಿ. ಕಾಲೇಜ್, ಬಸವೇಶ್ವರ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜ್, ಶಾಸ್ತ್ರೀಜಿ ಹೈಸ್ಕೂಲ್, ವಿಡಿಎಸ್‌ಟಿ ಗಂಡು ಮಕ್ಕಳ ಪ್ರೌಢಶಾಲೆ, ವಿಡಿಎಸ್‌ಟಿ ಹೆಣ್ಣುಮಕ್ಕಳ ಸಂಯುಕ್ತ ಪಿಯು ಕಾಲೇಜು, ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆ, ಸಿ.ಎಸ್. ಪಾಟೀಲ ಬಾಲಕರ ಪ್ರೌಢಶಾಲೆ, ಲೊಯೊಲಾ ಹೈಸ್ಕೂಲ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಿ.ಜಿ. ಸ್ಟಡಿ ಸೆಂಟರ್ ನರಸಾಪುರ, ಎಚ್.ಸಿ.ಇ.ಎಸ್. ಪದವಿ ಪೂರ್ವ ಕಾಲೇಜು, ಎ.ಎಸ್.ಎಸ್. ಕಾಮರ್ಸ್ ಕಾಲೇಜು, ತೋಂಟದಾರ್ಯ ಕಾಲೇಜ್ ಆಫ್ ಎಂಜಿನಿಯರಿಂಗ್, ಗುರುಬಸವ ಇಂಗ್ಲಿಷ್ ಮಿಡಿಯಂ ಸ್ಕೂಲ್, ಸಿಡಿಒ ಜೈನ್ ಆಂಗ್ಲ ಮಾಧ್ಯಮ ಶಾಲೆ, ಜಿ.ಡಿ. ಶಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಶ್ರೀ ಮಹಾವೀರ ಜೈನ್ ಇಂಗ್ಲಿಷ್ ಮಿಡಿಯಂ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜ್, ಬಸವೇಶ್ವರ ಪ್ರೌಢಶಾಲೆ.ಪರೀಕ್ಷಾ ಕೇಂದ್ರಗಳ ಸುತ್ತಲೂ ಪ್ರತಿಬಂಧಕಾಜ್ಞೆ ಜಾರಿ: ಕರ್ನಾಟಕ ಲೋಕಸೇವಾ ಆಯೋಗವು 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಡಿ. 29ರಂದು ನಡೆಸಲಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಡಿ. 29ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6ರ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳು ತಪಾಸಣೆಗೆ ಒಳಗಾಗುವುದು ಕಡ್ಡಾಯ. ಅಪಾರದರ್ಶಕ ನೀರಿನ ಬಾಟಲಿಯನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಎಲೆಕ್ಟ್ರಾನಿಕ್ ಉಪಕರಣ, ಲಾಗ್ ಟೇಬಲ್ಸ್, ಕೈಚೀಲ, ಪರ್ಸ್ ನೋಟುಗಳು, ಚಾರ್ಟ್, ಬಿಡಿ ಹಾಳೆಗಳು ಅಥವಾ ರೆಕಾರ್ಡಿಂಗ್ ವಸ್ತುಗಳನ್ನೂ ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಹೀಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆಗೆ ಮುಂಚಿತವಾಗಿ ಸಂಪೂರ್ಣ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿರುತ್ತದೆ.ಕರ್ನಾಟಕ ಲೋಕಸೇವಾ ಆಯೋಗವು ಅಭ್ಯರ್ಥಿಗಳ ಪ್ರವೇಶಪತ್ರದಲ್ಲಿ ತಿಳಿಸಿರುವ ವಸ್ತ್ರ ಸಂಹಿತೆಯನ್ನು ಅಭ್ಯರ್ಥಿಗಳ ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.