ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮುಂದಿನ ಎರಡ್ಮೂರು ತಿಂಗಳಿನಲ್ಲಿ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಅವಧಿ ಮುಗಿಯುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಸಕಾಲಕ್ಕೆ ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ನಡೆಸಬೇಕು ಎಂದು ಜಿಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಕಾನೂನು ಸಲಹೆಗಾರ ಬಾಪುಗೌಡ ಬಿರಾದಾರ ಹೇಳಿದರು.ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡದೆ ಅವುಗಳ ಅಧಿಕಾರವನ್ನು ಮೊಟಕುಗೊಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿರುವಂತೆ ಎದ್ದು ಕಾಣುತ್ತಿದೆ. ಇದರಿಂದ ಗ್ರಾಮಗಳು, ತಾಲೂಕುಗಳು ಅಭಿವೃದ್ಧಿ ಆಗುತ್ತಿಲ್ಲ. ಸರ್ಕಾರಗಳು ಇನ್ನಿಲ್ಲದ ಕಾರಣಗಳನ್ನು ಹೇಳಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಗಳ ಚುನಾವಣೆಯನ್ನು ಮುಂದೂಡುತ್ತಿವೆ. ಅದರಂತೆ 2026 ಫೆಬ್ರುವರಿಯಲ್ಲಿ ಗ್ರಾಮ ಪಂಚಾಯತಿಗಳ ಸದಸ್ಯರ ಅಧಿಕಾರವೂ ಮುಕ್ತಾಯವಾಗುವುದರಿಂದ ಅವುಗಳ ಚುನಾವಣೆಯನ್ನು ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದಗೊಂಡ ರುದ್ರಗೌಡರ ಮಾತನಾಡಿ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ವ್ಯವಸ್ಥೆಯನ್ನು ಮೊಟಕುಗೊಳಿಸುವ ಕೆಲಸ ಆಗಬಾರದು. ಅಧಿಕಾರಿಗಳು, ಶಾಸಕಾಂಗ ವ್ಯವಸ್ಥೆಯಿಂದಾಗಿ ಪಂಚಾಯತ್ ರಾಜ್ ವ್ಯವಸ್ಥೆ ಹಾಳಾಗಿದೆ. 15ನೇ ಹಣಕಾಸು ಯೋಜನೆಯ ಅನುದಾನವನ್ನು ಸರ್ಕಾರ ತಮಗೆ ಬೇಕಾದಂತೆ ಅನುದಾನ ಬಳಸಿಕೊಳ್ಳುತ್ತಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಸದಸ್ಯರಿಗೆ ಯಾವುದೇ ಅಧಿಕಾರವನ್ನು ಕೊಡುತ್ತಿಲ್ಲ. ಇಲ್ಲಿನ ಸಿಬ್ಬಂದಿಗಳ ಸಂಬಳ, ವಿದ್ಯುತ್ ಬಿಲ್ ಎಲ್ಲವನ್ನೂ ಪಂಚಾಯತಿ ಅನುದಾನದಲ್ಲೇ ಕಟ್ಟಿಸಲಾಗುತ್ತದೆ. ಹೀಗಾಗಿ, ಅಕ್ಟೋಬರ್‌ನಲ್ಲಿ ಚಿಂತನಾ ಸಭೆ ನಡೆಸಿ ಸಂಬಂಧಿಸಿದ ವಿಧಾನ ಪರಿಷತ್ ಸದಸ್ಯರ, ಸಚಿವರ ಮೂಲಕ ಸಕಾಲಕ್ಕೆ ಚುನಾವಣೆ ನಡೆಸುವಂತೆ ಕೋರಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂಬುದನ್ನು ತಿಳಿಸಿದರು.ಇನ್ನು, ಜಿಲ್ಲಾಧ್ಯಕ್ಷ ಎಂ.ಎಚ್.ಪಠಾಣ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಚುನಾವಣೆ ವೇಳೆ ಗ್ರಾಮ ಪಂಚಾಯತಿ ಸದಸ್ಯರನ್ನು ಬಳಸಿಕೊಂಡು, ಇದೀಗ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ಅವಧಿ ಇನ್ನೇನು ಎರಡ್ಮೂರು ತಿಳಗಳು ಇದ್ದು, ಅಧಿಕಾರಾವದಿ ಮುಗಿಯಲಿದೆ. ಸಮಯಕ್ಕೆ ಸರಿಯಾಗಿ ಚುನಾವಣೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು, ಜೊತೆಗೆ ನ್ಯಾಯಾಲಯದಲ್ಲಿ ಪಿಐಎಲ್ ಹಾಕುವ ಮೂಲಕ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರದೀಪ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಒಟ್ಟು 6 ಸಾವಿರ ಪಂಚಾಯತಿಗಳಿದ್ದು, ಒಟ್ಟು 96 ಸಾವಿರ ಸದಸ್ಯರಿದ್ದಾರೆ. ಹೀಗಾಗಿ, ಗ್ರಾಮ ಪಂಚಾಯತಿ ಚುನಾವಣೆಯನ್ನು ನಿಗದಿತ ಅವಧಿಯಲ್ಲಿಯೇ ಮಾಡಬೇಕು ಎಂದು ಒತ್ತಾಯಿಸಿದರು.ಈ ಸುದ್ದಿಗೋಷ್ಠಿಯಲ್ಲಿ ರಮೇಶ ರಾಠೋಡ, ಸಾಹೇಬಗೌಡ ಪಾಟೀಲ, ಬಿ.ಸಿ.ಚೌಧರಿ ಮುಂತಾದವರು ಉಪಸ್ಥಿತರಿದ್ದರು.