ಸಾರಾಂಶ
ಕನ್ನಡಪ್ರಭವಾರ್ತೆ ಬೆಳಗಾವಿ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಮೀಕ್ಷೆಯು ಜಾತಿಗಣತಿ ಎಂದು ಪ್ರಚಾರ ಪಡೆಯುತ್ತಿದೆ. ಆದರೆ ಇದು ಜಾತಿಗಣತಿಯಲ್ಲ, ಸಮಗ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಡಾ.ಸಿ.ಎಂ.ಕುಂದಗೋಳ ಸ್ಪಷ್ಟಪಡಿಸಿದರು.ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶಿಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಸಮೀಕ್ಷೆಯ ಆರಂಭದಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಅನಾನುಕೂಲ ಆಗಿದ್ದು ಅವುಗಳನ್ನು ಸರಿಪಡಿಸಲಾಗಿದೆ ಎಂದ ಅವರು, ಸಮೀಕ್ಷೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಸವಾಲುಗಳು, ಸಾರ್ವಜನಿಕರ ಪ್ರತಿಕ್ರಿಯೆ, ತಾಂತ್ರಿಕ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಕುಂದಗೋಳ ಚರ್ಚಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೇವೆ ಎಂಬ ತಪ್ಪು ಕಲ್ಪನೆಯಿಂದ ಸಮೀಕ್ಷೆ ವೇಳೆ ಸಾರ್ವಜನಿಕರು ಕೆಲ ವಿಷಯಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಕುರಿತು ತಿಳಿಹೇಳಿ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದರು.ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಖಾನಾಪೂರ ತಾಲೂಕಿನಲ್ಲಿ ಗುಡ್ಡಗಾಡು ಪ್ರದೇಶವಿರುವ ಕಾರಣ ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ ಆದರೂ ಸಹ ಪ್ರತಿ ಮನೆಗಳಿಗೆ ತೆರಳಿ ಗಣತಿದಾರರು ಸಮೀಕ್ಷೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮೀಕ್ಷಾ ಶಿಬಿರಗಳನ್ನು ಆಯೋಜಿಸಿದಾಗ ಜನರನ್ನು ಕರೆತರಲು ಹಾಗೂ ಸಮೀಕ್ಷೆಗಾರರಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಆಯೋಗಕ್ಕೆ ಮನವಿ ಮಾಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಪ್ರತಿ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿಯೋಜಿತ ಅಧಿಕಾರಿ, ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಮೀಕ್ಷೆ ವೇಳೆ ಆರ್ಥಿಕ ಮಾಹಿತಿ ನೀಡುವ ಕುರಿತು ಜನರು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿವೆ ಎಂದು ಆಯೋಗದ ಸದಸ್ಯರ ಗಮನಕ್ಕೆ ತಂದರು.ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ ಮಾತನಾಡಿ, ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಸ್ವಯಂ ಘೋಷಿತ ಮಾಹಿತಿಗಳನ್ನು ಜನರಿಂದ ಪಡೆಯಲಾಗಿದೆ. ಸ್ವಯಂ ಘೋಷಣೆಗೆ ನಗರ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಹರ್ಷಾ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 11,85,888 ಕುಟುಂಬಗಳಿವೆ. ನೆಟ್ವರ್ಕ್ ಮತ್ತಿತರ ತಾಂತ್ರಿಕ ಸಮಸ್ಯೆ ಪೀಡಿತ ಪ್ರದೇಶಗಳಲ್ಲಿರುವ ಒಟ್ಟು 16,711 ಕುಟುಂಬಗಳಿಗೆ ವಿಶೇಷ ಶಿಬಿರ ಮೂಲಕ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲಾದ್ಯಂತ ಒಟ್ಟಾರೆ 10,200 ಸಮೀಕ್ಷೆದಾರರು ಸಮೀಕ್ಷಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಶೇ.30.55ರಷ್ಟು ಸಮೀಕ್ಷೆ ಪೂರ್ಣಗೊಂಡಿರುತ್ತದೆ. ಹೆಚ್ಚುವರಿ ಐದುನೂರು ಸಿಬ್ಬಂದಿ ನೀಡಿರುವುದರಿಂದ ಸಮೀಕ್ಷೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ತಿಳಿಸಿದರು.ಈ ವೇಳೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಜಿಪಂ ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ ಕೋಳೇಕರ, ಡಿಡಿಪಿಐ ಲೀಲಾವತಿ ಹಿರೇಮಠ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.ಸಮೀಕ್ಷೆ ಪೂರ್ಣಗೊಳಿಸಿದ 36 ಗಣತಿದಾರರಿಗೆ ಸನ್ಮಾನ:
ಜಿಲ್ಲೆಯಲ್ಲಿ 36 ಜನ ಗಣತಿದಾರರು ಶೇ.100ರಷ್ಟು ಎರಡು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ್ದು, ಇದೇ ಸಂದರ್ಭದಲ್ಲಿ ಅವರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಡಾ.ಸಿ.ಎಂ.ಕುಂದಗೋಳ ಸನ್ಮಾನಿಸಿದರು. ಯಾವುದೇ ರೀತಿಯ ತಾಂತ್ರಿಕ ತೊಂದರೆಯಾಗದ ಕಾರಣ ಕಡಿಮೆ ಅವಧಿಯಲ್ಲಿ ಸಮೀಕ್ಷೆ ಪೂರ್ಣಗಳಿಸಲು ಸಹಾಯವಾಯಿತು ಎಂದು ಸಮೀಕ್ಷೆ ಪೂರ್ಣಗೊಳಿಸಿದ ಗಣತಿದಾರರೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡರು.