ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಸೆ.29 ರಂದು ಬೆಳಗ್ಗೆ 86 ಸಾವಿರ ಕ್ಯೂಸೆಕ್ ಹಾಗೂ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ 1.25 ಲಕ್ಷ ಕ್ಯೂಸೆಕ್ ಹಾಗೂ ಸೀನಾ ನದಿಯಿಂದ ಭೀಮಾ ನದಿಗೆ 1.16 ಲಕ್ಷ ಕ್ಯೂಸೆಕ್ ಸೇರಿ ಒಟ್ಟು 3.27 ಲಕ್ಷ ಕ್ಯೂಸೆಕ್ ನೀರು ಹರಿ ಬಿಟ್ಟಿರುವುದರಿಂದ ತಾಲೂಕಿನ 12 ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಅಲ್ಲದೇ, ಮಿರಗಿ ಗ್ರಾಮದ ಅಂಬಾ ಭವಾನಿ, ಖೇಡಗಿ ಗುಡ್ಡದ ಬಸವರಾಜೇಂದ್ರ ಮಠ, ಬುಯ್ಯಾರ ಗ್ರಾಮದ ಶಾಲೆಯ ಸುತ್ತಲಿನ ಪ್ರದೇಶ ಜಲಾವೃತಗೊಂಡಿದೆ.ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ ಸೀನಾ ನದಿಯಿಂದ, ಕೊಲೆಗಾಂವ ಮತ್ತು ಚಾಂದನಿ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮ ಸೋಲಾಪುರ ಮತ್ತು ವಿಜಯಪುರ ಮಾರ್ಗದ ಹೆದ್ದಾರಿ ಮತ್ತೆ ಜಲಾವೃತವಾಗಿದ್ದು, ರಸ್ತೆ ಸಂಚಾರ ಮತ್ತೆ ಬಂದಾಗಿದೆ. ಕಳೆದ ಮೂರು-ನಾಲ್ಕು ದಿನಗಳ ಹಿಂದೆ, ಮಹಾರಾಷ್ಟ್ರದ ಹತ್ತೂರಿನಲ್ಲಿ ಸೀನಾ ನದಿಯ ಪ್ರವಾಹದ ನೀರು ರಸ್ತೆ ಮೇಲೆ ಆವರಿಸಿದ್ದರಿಂದಾಗಿ ಸೋಲಾಪುರ-ವಿಜಯಪುರ ಹೆದ್ದಾರಿಯ ಸಂಚಾರವನ್ನು ಬಂದ್ ಮಾಡಲಾಗಿತು. ಈಗ ಮತ್ತೆ ಅದೇ ಪರಿಸ್ಥಿತಿ ಮುಂದುವರಿದಿದ್ದು, ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲಿನ ಸಂಚಾರ ಬಂದ್ ಮಾಡಲಾಗಿದೆ. ಇನ್ನು, ತಾಲೂಕಿನ ಮಿರಗಿ, ಗುಬ್ಬೆವಾಡ, ಖೇಡಗಿ, ಪಡನೂರ ಸೇರಿದಂತೆ ಭೀಮಾ ನದಿ ಪಾತ್ರದ ವಿವಿಧ ಗ್ರಾಮಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರಿಂದ ಜನರು ಗ್ರಾಮದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಖೇಡಗಿ ಗ್ರಾಮದಲ್ಲಿ ಹನುಮಾನ ದೇವಾಲಯ, ಮಠ ಮತ್ತು ಅಂಗಡಿಗಳು, ಅಲ್ಲದೇ, ಅಲ್ಲಿಯ ಶುದ್ದ ಕುಡಿಯುವ ನೀರಿನ ಘಟಕ ಕೂಡ ಜಲಾವೃತವಾಗಿವೆ. ನೋಡಲ್ ಅಧಿಕಾರಿಗಳು ಮೇಲಿಂದ ಮೇಲೆ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಗ್ರಾಮದಲ್ಲೇ ಬೀಡುಬಿಟ್ಟಿದ್ದಾರೆ.