ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಲೋಕಸಭೆ ಚುನಾವಣೆಗೂ ಮುನ್ನವೇ ತಾಪಂ, ಜಿಪಂ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಿ. ಈಗ ನಮ್ಮದೇ ಸರ್ಕಾರವಿದೆ. ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಅವಕಾಶವಿದೆ. ಲೋಕಸಭೆ ಚುನಾವಣೆಯಲ್ಲೂ ಇದು ಅನುಕೂಲವಾಗುತ್ತದೆ.
ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಜಿಪಂ ತಾಪಂ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿಗೆ ಈ ಬೇಡಿಕೆ ಇಡುತ್ತಿದ್ದಾರೆ. ಹಾಗೆ ನೋಡಿದರೆ ಕಳೆದ ಮೂರೂವರೆ ವರ್ಷಗಳ ಹಿಂದೆಯೇ ಜಿಪಂ, ತಾಪಂ ಅವಧಿ ಮುಕ್ತಾಯವಾಗಿದೆ. ಆಗ ಬಿಜೆಪಿ ಸರ್ಕಾರವಿತ್ತು. ಆದರೆ, ಆಗ ಚುನಾವಣೆ ನಡೆಯಲಿಲ್ಲ. ಮುಂದೆ ಎಂಎಲ್‌ಸಿ, ಎಂಎಲ್‌ಎ ಚುನಾವಣೆಗಳೆಲ್ಲ ಬಂದವು. ವಿಧಾನಸಭೆ ಚುನಾವಣೆಗೂ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದರೆ ನಿರೀಕ್ಷಿಸಿದಷ್ಟು ಸ್ಥಾನಗಳು ಬರದಿದ್ದರೆ ಎಂಎಲ್‌ಎ ಎಲೆಕ್ಷನ್‌ಗೆ ಕಷ್ಟವಾಗುತ್ತದೆ ಎಂದುಕೊಂಡು ಚುನಾವಣೆ ನಡೆಸಲಿಲ್ಲ ಎಂಬ ಆರೋಪ ಆಗ ಕಾಂಗ್ರೆಸ್ಸಿಗರು ಮಾಡುತ್ತಿದ್ದರು.ವಿಧಾನಸಭೆ ಚುನಾವಣೆಯಲ್ಲೂ ಈ ವಿಷಯವನ್ನೂ ಅಸ್ತ್ರವನ್ನಾಗಿ ಮಾಡಿಕೊಂಡಿದ್ದುಂಟು. ಇದೀಗ ಕಾಂಗ್ರೆಸ್ ಸರ್ಕಾರವೇ ಆಡಳಿತಕ್ಕೆ ಬಂದು ಬರೋಬ್ಬರಿ 6 ತಿಂಗಳಿಗೂ ಅಧಿಕ ಕಾಲ ಗತಿಸಿದೆ. ಆದರೂ ಜಿಪಂ ತಾಪಂ ಚುನಾವಣೆ ನಡೆಸುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಬೇಸರವನ್ನುಂಟು ಮಾಡಿದೆ.
ಈ ನಡುವೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಜಿಪಂ ತಾಪಂ ಚುನಾವಣೆ ವಿಷಯವೂ ಚರ್ಚೆಯಾಗಿದೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಚುನಾವಣೆ ನಡೆಸಿ ಎಂಬ ಒತ್ತಡ ಜಾಸ್ತಿಯಾಗುತ್ತಿದೆ.ಇನ್ನು ಎಷ್ಟು ದಿನ:
ಕಳೆದ ಮೂರೂವರೆ ವರ್ಷದ ಹಿಂದೆಯೇ ಜಿಪಂ ತಾಪಂ ಅವಧಿ ಮುಕ್ತಾಯವಾಗಿದೆ. ಆಗಿನಿಂದಲೂ ಟಿಕೆಟ್ ಆಕಾಂಕ್ಷಿಗಳು ಆಯಾ ಕ್ಷೇತ್ರಗಳಲ್ಲಿ ಜನರಿಗೆ ಹತ್ತಿರವಾಗುವ ಉದ್ದೇಶದಿಂದ ನಾನಾ ಕೆಲಸಗಳನ್ನು ಮಾಡುತ್ತಿದ್ದಾರೆ. ಟಿಕೆಟ್ ಪಡೆಯಲೇಬೇಕೆಂಬ ಹಂಬಲದಿಂದ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಅವರ ವಿರುದ್ಧ ನಾವೇ ಆರೋಪಿಸುತ್ತಿದ್ದೇವು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಪ್ರಜಾಪ್ರಭುತ್ವದ ವಿರೋಧಿ ನೀತಿ ಅನುಸರಿಸುತ್ತಿದೆ ಎಂದೆಲ್ಲ ತೆಗಳುತ್ತಿದ್ದೇವು. ಇದೀಗ ನಮ್ಮದೇ ಸರ್ಕಾರವಿದೆ. ನಮ್ಮ ಸರ್ಕಾರವೂ ಅದನ್ನೇ ಮಾಡುತ್ತಿದೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಲಾರಂಭಿಸಿದೆ. ಅದಕ್ಕಾಗಿ ಬೇಗನೆ ಜಿಪಂ ತಾಪಂ ಚುನಾವಣೆ ನಡೆಸಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಕಾರ್ಯಕರ್ತರದ್ದು.ಈ ಸಂಬಂಧ ಕಾರ್ಯಕರ್ತರು, ಪಕ್ಷದ ಜಿಲ್ಲಾಧ್ಯಕ್ಷರಿಗೆ, ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದುಂಟು. ಪಕ್ಷ ನಡೆಸುವ ಪ್ರತಿ ಸಭೆಗಳಲ್ಲೂ ಈ ಬಗ್ಗೆ ಧ್ವನಿ ಎತ್ತುವುದುಂಟು. ಮುಖಂಡರು, ವೀಕ್ಷಕರಿಂದ ಬರೀ ಶೀಘ್ರವೇ ನಡೆಸಲಾಗುತ್ತಿದೆ ಎಂಬ ಉತ್ತರ ಬರುತ್ತಿದೆ ಎಂಬ ಅಸಮಾಧಾನ ಟಿಕೆಟ್ ಆಕಾಂಕ್ಷಿಗಳದ್ದು.
ಲೋಕಸಭೆ ಚುನಾವಣೆಗೂ ಮುನ್ನವೇ ಜಿಪಂ ತಾಪಂ ಚುನಾವಣೆ ನಡೆಸಬೇಕು. ಹೇಗಾದರೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಹೀಗಾಗಿ, ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಅವಕಾಶವಿದೆ. ಜತೆಗೆ ಮುಂದೆ ಹೀಗೆ ಗೆದ್ದವರು ಲೋಕಸಭೆ ಚುನಾವಣೆಯಲ್ಲೂ ಕೆಲಸ ಮಾಡಲು ಹುಮ್ಮಸ್ಸಿನಿಂದಿರುತ್ತದೆ. ಆದಕಾರಣ ಈಗಲೇ ಜಿಪಂ, ತಾಪಂ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ.ಕೋಟ್..ಜಿಪಂ, ತಾಪಂ ಚುನಾವಣೆಗೆ ಅಗತ್ಯ ಸಿದ್ಧತೆಯನ್ನು ನಮ್ಮ ಪಕ್ಷ ಮಾಡಿಕೊಳ್ಳುತ್ತಿದೆ. ಆದರೆ, ಯಾವಾಗ ನಡೆಸಲಾಗುತ್ತದೆಯೋ ಗೊತ್ತಿಲ್ಲ. ಬೇಗನೆ ನಡೆಸಬೇಕು. ನಮ್ಮದೇ ಸರ್ಕಾರವಿದೆ ಎಂಬ ಒತ್ತಡ ಮಾತ್ರ ಟಿಕೆಟ್ ಆಕಾಂಕ್ಷಿಗಳು, ಮುಖಂಡರ ಒತ್ತಡ ಜಾಸ್ತಿಯಾಗುತ್ತಿದೆ.
ಅನೀಲಕುಮಾರ ಪಾಟೀಲ, ಜಿಲ್ಲಾಧ್ಯಕ್ಷ, ಧಾರವಾಡ ಗ್ರಾಮೀಣ ಕಾಂಗ್ರೆಸ್ ಸಮಿತಿಕೋಟ್...
ಜಿಪಂ, ತಾಪಂ ಅವಧಿ ಮುಗಿದು ಬರೋಬ್ಬರಿ ಮೂರೂವರೆ ವರ್ಷದ ಮೇಲಾಗಿದೆ. ಚುನಾವಣೆ ನಡೆಸಲು ಯಾವುದೇ ಸಮಸ್ಯೆಯಿಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಚುನಾವಣೆ ನಡೆಸಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಬಂದಿದೆ ಈಗಲೂ ಇವರೂ ನಡೆಸುತ್ತಿಲ್ಲ. ಬರೀ ರಾಜಕಾರಣ ಮಾಡುತ್ತಿದ್ದಾರೆ,.ಶಿವಾನಂದ ಕರಿಗಾರ, ಜಿಪಂ ಮಾಜಿ ಉಪಾಧ್ಯಕ್ಷ