ಸಂಗೀತ ಪರೀಕ್ಷೆ ಗದಗದಲ್ಲೇ ನಡೆಸಿ

| Published : Jul 26 2024, 01:36 AM IST

ಸಾರಾಂಶ

ಕಲ್ಲಯ್ಯಜ್ಜನವರು ಗುರುವಾರ ನೂರಾರು ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳೊಂದಿಗೆ ಸ್ವತಃ ತಾವೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು

ಗದಗ: ಸಂಗೀತ ಪರೀಕ್ಷಾ ಕೇಂದ್ರವನ್ನು ರಾಜ್ಯ ಸರ್ಕಾರ ಧಿಡೀರನೆ ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದನ್ನು ಖಂಡಿಸಿ ಪಂಚಾಕ್ಷರಿ ಗವಾಯಿಗಳ ಮಠದ ಪೀಠಾಧಿಪತಿ ಡಾ.ಕಲ್ಲಯ್ಯಜ್ಜನವರು ನೂರಾರು ವಿದ್ಯಾರ್ಥಿಗಳೊಂದಿಗೆ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಂಗೀತ ಪರೀಕ್ಷೆ ಗದಗದಲ್ಲಿಯೇ ನಡೆಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಕಲ್ಲಯ್ಯಜ್ಜನವರು ಗುರುವಾರ ನೂರಾರು ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳೊಂದಿಗೆ ಸ್ವತಃ ತಾವೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ನಗರದ ಭೂಮರೆಡ್ಡಿ ಸರ್ಕಲ್ ನಲ್ಲಿರುವ ಶ್ರೀಪುಟ್ಟರಾಜ ಗವಾಯಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಿ, ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕಲ್ಲಯ್ಯಜ್ಜನವರು, ಪ್ರಾರಂಭದಿಂದಲೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರಾಜ್ಯಮಟ್ಟದ ವಿಶೇಷ ಸಂಗೀತ ನೃತ್ಯ ತಾಳವಾದ್ಯ ಪರೀಕ್ಷೆಗಳನ್ನು ನಡೆಸುತ್ತಾ ಬಂದಿದ್ದು, ಮೊದಲಿನಿಂದಲೂ ಗದಗ ಜಿಲ್ಲಾ ಕೇಂದ್ರದಲ್ಲಿಯೇ ಪರೀಕ್ಷೆ ನಡೆಸಿಕೊಂಡು ಬಂದಿದ್ದರು. ಆದರೆ, ಈಗ ಏಕಾಏಕಿ ರಾಜ್ಯ ಸರ್ಕಾರ ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದವರಿಗೆ ನೀಡಿ ಸಂಗೀತ ಪರೀಕ್ಷೆಯನ್ನು ಗದಗ ಬಿಟ್ಟು ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದು ಖಂಡನೀಯವಾಗಿದೆ ಎಂದು ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅಂಧ, ಅನಾಥ, ವಿಕಲಚೇತನರು ಪರೀಕ್ಷೆ ಬರೆಯಲು ಒಬ್ಬ ಸಹಾಯಕ ಬರಹಗಾರರನ್ನು ಕರೆದುಕೊಂಡು ಹೋಗಬೇಕು. ನಂತರ ಪ್ರಾಯೋಗಿಕವಾಗಿ ಪರೀಕ್ಷೆಗೆ ಬೇಕಾಗುವ ತಬಲಾ, ಹಾರ್ಮೋನಿಯಂ, ತಂಬೂರಿ ಸೇರಿದಂತೆ ಮೊದಲಾದ ವಾದ್ಯಗಳನ್ನು ಸುಮಾರು 60 ಕಿಲೋ ಮೀಟರ್ ದೂರವಿರುವ ಹುಬ್ಬಳ್ಳಿಗೆ ಹೇಗೆ ತೆಗೆದುಕೊಂಡು ಹೋಗಬೇಕು? ಜತೆಗೆ ವಾಹನದ ಸೌಕರ್ಯ ಕೂಡ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಇಲ್ಲ. ಕೂಡಲೇ ಹುಬ್ಬಳ್ಳಿ ಪರೀಕ್ಷಾ ಕೇಂದ್ರ ಬಿಟ್ಟು ಮತ್ತೆ ಯಥಾವತ್ತಾಗಿ ಗದಗದಲ್ಲಿಯೇ ಸಂಗೀತ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ನೂರಾರು ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳು ಇದ್ದರು.