ಯಾವುದೇ ಗೊಂದಲವಿಲ್ಲದೆ ಪಿಯು ಪರೀಕ್ಷೆ ನಡೆಸಿ: ಜಿಲ್ಲಾಧಿಕಾರಿ ನತ್ಯಭಾಮ

| Published : Feb 22 2024, 01:49 AM IST

ಸಾರಾಂಶ

ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ.೧ ರಿಂದ ೨೨ ರ ವರೆಗೆ ನಡೆಯುತ್ತಿದ್ದು, ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದಂತೆ ವ್ಯವಸ್ಥಿತ ಹಾಗೂ ಸುಗಮವಾಗಿ ನಡೆಸಲು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೂಚನೆ । ಅಧಿಕಾರಿಗಳಿಗೆ ನಿರ್ದೇಶನ । ಮಾ.1-22 ದ್ವಿತೀಯ ಪಿಯುಸಿ ಪರೀಕ್ಷೆ

ಕನ್ನಡಪ್ರಭ ವಾರ್ತೆ ಹಾಸನ

ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ.೧ ರಿಂದ ೨೨ ರ ವರೆಗೆ ನಡೆಯುತ್ತಿದ್ದು, ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದಂತೆ ವ್ಯವಸ್ಥಿತ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಕ್ಯಾಮರಾಗಳು ಸುವ್ಯವಸ್ಥೆಯಲ್ಲಿದ್ದು, ಕಾರ್ಯನಿರ್ವಹಿಸುವ ಬಗ್ಗೆ ಪರಿಶೀಲಿಸಿ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು ಎಂದರು.

೨೦೨೪ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ೧೪೭೬೮ ಹೊಸ ವಿದ್ಯಾರ್ಥಿಗಳು, ೭೭೧ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೪೨೧ ಖಾಸಗಿ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು ೧೫೯೬೦ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಲಕರು-೬೩೪೯ ಹಾಗೂ ಬಾಲಕಿಯರು -೮೪೧೯ ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗ-೩೧೬೮, ವಾಣಿಜ್ಯ ವಿಭಾಗ-೪೯೪೫, ವಿಜ್ಞಾನ ವಿಭಾಗ-೬೬೫೫ ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿಸಿದರು.

ಹಾಸನ-೧೧, ಆಲೂರು-೧, ಅರಸೀಕೆರೆ-೭, ಅರಕಲಗೂಡು-೩, ಬೇಲೂರು-೨, ಚನ್ನರಾಯಪಟ್ಟಣ-೪, ಹೊಳೆನರಸೀಪುರ-೩, ಸಕಲೇಶಪುರ-೧ ಪರೀಕ್ಷಾ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೩೨ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಸಿ.ಸಿ. ಕ್ಯಾಮರಾ ಕಣ್ಗಾವಲು ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಿಆರ್‌ಪಿಸಿ ಸೆಕ್ಷನ್ ೧೪೪ ರಡಿಯಲ್ಲಿ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್/ ಸೈಬರ್ ಕೇಂದ್ರಗಳು, ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಇತರರು ಯಾರೂ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವಂತಿಲ್ಲ. ಇದು ಮಾಧ್ಯಮದವರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಹಾಗೂ ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಗೋಪ್ಯ ಲಕೋಟೆಗಳನ್ನು ಸಾಗಿಸುವ ೧೦ ವಾಹನಗಳಿಗೆ ಶಸ್ತ್ರಸಜ್ಜಿತ ಪೊಲೀಸ್ ಬೆಂಗಾವಲು ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೇಮಿಸಲಿದ್ದಾರೆ. ಈ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಂ ಅಳವಡಿಸಲಾಗಿದೆ ಎಂದು ತಿಳಿಸಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮಕ್ಕಳು ಪರೀಕ್ಷೆ ಬರೆಯುತ್ತಿದ್ದರೆ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳದಂತೆ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆ ಯಾವುದೇ ಸಿಬ್ಬಂದಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್, ಐ ಪೋನ್, ಗ್ಯಾಜೆಟ್ ಸೇರಿದಂತೆ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾಲಿಂಗಯ್ಯ ಉಪಸ್ಥಿತರಿದ್ದರು.ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ.