ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಗಣಿತ ಮತ್ತು ವಿಜ್ಞಾನ ಕಷ್ಟವಾದರೆ ಅಲ್ಲಿ ತಾಲೂಕು ಹಂತದಲ್ಲಿ ವಿಶೇಷ ತರಗತಿ ನಡೆಸಬೇಕು ಅನುದಾನ ಬೇಕಾದಲ್ಲಿ ಕೆಕೆಆರ್‌ಡಿಬಿ ಅನುದಾನದಡಿಯಲ್ಲಿ ನೀಡಲಾಗುವುದು ಎಂದು ಜಿಪಂ ಸಿಇಒ ಗಿರೀಶ್ ದಿಲೀಪ್ ಬದೊಲೆ ಹೇಳಿದರು.ಕೆಕೆಆರ್‌ಡಿಬಿ ಆಯುಕ್ತಾಲಯ, ಕಲಬುರಗಿ, ಜಿಲ್ಲಾಡಳಿತ ಹಾಗೂ ಜಿ.ಪಂ, ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮ ಪಡಿಸಲು ಮುಖ್ಯ ಶಿಕ್ಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರತಿ ಶಾಲೆಯಲ್ಲಿ ವಿಶೇಷ ತರಗತಿ ನಡೆಸಲು ಹಾಗೂ ಯಾವ ಶಾಲೆಯಲ್ಲಿ ತೀರಾ ಕಡಿಮೆ ಫಲಿತಾಂಶ ಬಂದಿದೆ ಅಂತಹ ಶಾಲೆಗಳಲ್ಲಿ ಸಾಯಂಕಾಲದ ತರಗತಿ ನಡೆಸಲು ಸಿದ್ದತೆ ಮಾಡಲು ಉಪನಿರ್ದೇಶಕರಿಗೆ ತಿಳಿಸಲಾಯಿತು.ಬಾಗಿಲು ಮುಚ್ಚದಿರುವ ಶಾಲೆಗಳು ಬೆಳಗ್ಗೆ 1 ಗಂಟೆ ಮುಂಚಿತವಾಗಿ, ಸಂಜೆ 1 ಗಂಟೆ ವಿಶೇಷ ತರಗತಿ ನಡೆಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂದು ತಿಳಿಸುವುದು ನಿಮ್ಮ ಆದ್ಯ ಜವಾಬ್ದಾರಿಯಾಗಿರುತ್ತದೆ ಎಂದು ಮುಖ್ಯ ಗುರುಗಳಿಗೆ ಸೂಚಿಸಲಾಯಿತು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಎಲ್ಲಾ ಮುಖ್ಯ ಗುರುಗಳು ಶಿಕ್ಷಣ ಪದ್ಧತಿ ಅನುಸರಿಸಿ ಪರೀಕ್ಷಾ ವೇಳೆಯಲ್ಲಿ ನಕಲು ಮಾಡದಂತೆ ನೋಡಿಕೊಳ್ಳಬೇಕು. ಹಾಗೂ 8, 9 ಮತ್ತು 10ನೇ ತರಗತಿಯ ಪಠ್ಯಕ್ರಮ ಸಂಪೂರ್ಣವಾಗಿ ಮುಗಿಸಬೇಕು ಎಂದು ಮುಖ್ಯ ಗುರುಗಳಿಗೆ ತಿಳಿಸಿದರು.2024ನೇ ಸಾಲಿನಲ್ಲಿ 10ನೇ ತರಗತಿ ಫಲಿತಾಂಶ ಬಂದಾಗ ಪ್ರತಿ ತಾಲೂಕಿನ ಟಾಪರ್‌ಗೆ ಸನ್ಮಾನಿಸಲಾಗುವುದು. ಅದೇ ರೀತಿ ಶೇ.40 ಫಲಿತಾಂಶ ಬರದಿದ್ದರೆ ಅಂತಹ ಶಾಲೆಯ ಶಿಕ್ಷಕರ ಹಾಗೂ ಮುಖ್ಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಬಾಕಿ ಉಳಿದಿರುವ 60 ದಿನಗಳಲ್ಲಿ ಎಲ್ಲರು ಕಡ್ಡಾಯವಾಗಿ ಶ್ರಮ ಪಡೆದು 10ನೇ ತರಗತಿ ಮಕ್ಕಳ ಫಲಿತಾಂಶ ಶೇ.100ರಷ್ಟು ಬರಲು ಪ್ರಯತ್ನಿಸಿ ಎಂದು ಎಚ್ಚರಿಸಿದರು.
ಕೆಕೆಆರ್ಡಿಬಿಯಿಂದ ನಿಯೋಜತ ಸಮಾಲೋಚಕರಾದ ಪ್ರೊ. ನಾಗರಾಜ ಆರ್ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಹಾಗೂ ಕಾಪಿ ಮುಕ್ತ ಎಸ್ಸೆಸ್ಸೆಲ್ಸಿ ಫಲಿತಾಂಶ ಬರಲು ನಾವು ಪ್ರಯತ್ನಿಸುತ್ತಿದ್ದೇವೆ. ಅಲ್ಲದೇ ನಮ್ಮ ಜಿಲ್ಲೆ 20ನೇ ರ್‍ಯಾಂಕ್‌ಗಿಂತ ಅಧಿಕ ಫಲಿತಾಂಶ ತರುವ ಸಂಕಲ್ಪ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಕನಿಷ್ಠ ಶೇ.15ರಷ್ಟು ಹೆಚ್ಚಳಕ್ಕೆ ಮುಖ್ಯ ಶಿಕ್ಷಕರು ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪ್ರತಿಜ್ಞೆ ಮಾಡಿದರು.
ಡಿಡಿಪಿಐ ಸಲೀಂ ಪಾಷಾ, ಡೈಟ್ ಪ್ರಾಂಶುಪಾಲರಾದ ನಗನೂರ, ಉಪ ಪ್ರಾಂಶುಪಾಲರಾದ ಮೊಹಮ್ಮದ್ ಗುಲ್ಸಿನ್, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಫುರ್ಖಾನ್ ಪಾಷಾ, ಖುರ್ಷಿದ ಖಾದ್ರಿ ಹಾಜರಿದ್ದರು.