ಸಾರಾಂಶ
ಕೊಪ್ಪಳ:
ಮಾರ್ಚ್ 21ರಿಂದ ಏ. 4ರ ವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳ ಕುರಿತು ಶಾಲಾ ಶಿಕ್ಷಣ ಇಲಾಖೆಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ಚಟುವಟಿಕೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಾಗಿ ನಡೆಸಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಿಕಲಚೇತನ ವಿದ್ಯಾರ್ಥಿಗಳಿಗೆ ನೆಲಮಹಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ, ಅಂಧ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಹಾಗೂ ಬರವಣಿಗೆ ಸಹಾಯಕರ ಒಪ್ಪಿಗೆ ಪತ್ರ ಪರಿಶೀಲಿಸಬೇಕು ಎಂದು ಸೂಚಿಸಿದರು.
ಭಯಪಡಬೇಡಿ:ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯಪಡಬಾರದು ಎಂದು ಅವರಿಗೆ ಧೈರ್ಯ ತುಂಬಬೇಕು ಎಂದ ಜಿಲ್ಲಾಧಿಕಾರಿ, ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಕ್ಯಾಲ್ಕುಲೇಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತು ನಿಷೇಧಿಸಿದ್ದು ಕೊಠಡಿ ಮೇಲ್ವಿಚಾರಕರು ಸಹ ಮೊಬೈಲ್ ಬಳಸುವಂತಿಲ್ಲ ಎಂದರು.
ಖಜಾನೆ ಇಲಾಖೆಯಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ದಿನದಂದು ನಿಗದಿತ ಅವಧಿಯೊಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಹೊಣೆ ಆಯಾ ಮಾರ್ಗಾಧಿಕಾರಿಗಳದ್ದು. ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ, ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಪರೀಕ್ಷೆ ಕೇಂದ್ರಕ್ಕೆ ನಿಯೋಜನೆಗೊಂಡ ಶಿಕ್ಷಕರು, ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಅನ್ಯರಿಗೆ ಕೇಂದ್ರದ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದ ಜಿಲ್ಲಾಧಿಕಾರಿ, ಕೇಂದ್ರದ ಸುತ್ತ 200 ಮೀಟರ್ ಸುತ್ತಲು ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ಪರೀಕ್ಷೆ ವೇಳೆ ಸಿಸಿ ಕ್ಯಾಮೆರಾ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು. ವೆಬ್‌ಕಾಸ್ಟಿಂಗ್ ಮಾದರಿ ನಡೆಯುವ ಪರೀಕ್ಷೆ ಕುರಿತು ಕಳೆದ ಬಾರಿ ಶಿಕ್ಷಕರೇ ಮಕ್ಕಳಿಗೆ ಭಯಮೂಡಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಬಾರಿ ಆ ರೀತಿಯ ಘಟನೆಗಳು ಮರುಕಳಿಸದೆ ಮಕ್ಕಳು ಭಯಮುಕ್ತರಾಗಿ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಬೇಕು ಎಂದರು.
25000 ವಿದ್ಯಾರ್ಥಿಗಳ ನೋಂದಣಿ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಮಾತನಾಡಿ, ಈ ಬಾರಿ ಪರೀಕ್ಷೆಗೆ ಜಿಲ್ಲೆಯಲ್ಲಿ 25,578 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ 23, ಕೊಪ್ಪಳ 21, ಕುಷ್ಟಗಿ 15 ಹಾಗೂ ಯಲಬುರ್ಗಾ 14 ಸೇರಿದಂತೆ ಒಟ್ಟು 73 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕ ಹಾಗೂ ಪ್ರಶ್ನೆಪತ್ರಿಕೆ ಅಭಿರಕ್ಷಕರನ್ನು ನೇಮಿಸಲಾಗಿದೆ. ಬಿಇಒಗಳು ಆಯಾ ವಿಭಾಗಗಳ ಪ್ರಶ್ನೆ ಪತ್ರಿಕೆ ಪಾಲಕರಾಗಿರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್, ಬಿಇಒ, ವಿಷಯ ಪರಿವೀಕ್ಷಕರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ತಾಲೂಕು ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.