ಕರ್ನಾಟಕದ ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಪಾರವಾದ ಪುರಾತತ್ವ, ಐತಿಹಾಸಿಕ ನೆಲೆಗಳಿವೆ. ಇಂದಿನ ಯುವಪೀಳಿಗೆ ಪುರಾತತ್ವ ನೆಲೆ, ಅವುಗಳ ಇತಿಹಾಸ ಹಾಗೂ ಪಶ್ಚಿಮ ಘಟ್ಟಗಳ ವಿಶೇಷತೆ ಕುರಿತು ಅಧ್ಯಯನ ಮಾಡಬೇಕು ಎಂದು ಭಾರತದ ಪ್ರಖ್ಯಾತ ಪುರಾತತ್ವ ವಿದ್ವಾಂಸ ಪ್ರೊ. ರವೀಂದ್ರ ಕೋರಿಸೆಟ್ಟರ್ ಕರೆ ನೀಡಿದರು.

ಉಡುಪಿ: ಕರ್ನಾಟಕದ ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಪಾರವಾದ ಪುರಾತತ್ವ, ಐತಿಹಾಸಿಕ ನೆಲೆಗಳಿವೆ. ಇಂದಿನ ಯುವಪೀಳಿಗೆ ಪುರಾತತ್ವ ನೆಲೆ, ಅವುಗಳ ಇತಿಹಾಸ ಹಾಗೂ ಪಶ್ಚಿಮ ಘಟ್ಟಗಳ ವಿಶೇಷತೆ ಕುರಿತು ಅಧ್ಯಯನ ಮಾಡಬೇಕು ಎಂದು ಭಾರತದ ಪ್ರಖ್ಯಾತ ಪುರಾತತ್ವ ವಿದ್ವಾಂಸ ಪ್ರೊ. ರವೀಂದ್ರ ಕೋರಿಸೆಟ್ಟರ್ ಕರೆ ನೀಡಿದರು.

ಅವರು ನಗರದ ಎಂಜಿಎಂ ಕಾಲೇಜಿನಲ್ಲಿ ಆದಿಮ ಕಲಾ ಟ್ರಸ್ಟ್ ಉಡುಪಿ ಇದರ ಪ್ರಥಮ ವಾರ್ಷಿಕೋತ್ಸವದಲ್ಲಿ ಆದಿಮ ಕಲಾರತ್ನ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ದಕ್ಷಿಣ ಭಾರತದ ಹಲವಾರು ಪ್ರದೇಶಗಳಲ್ಲಿರುವ ಆದಿಮ ನೆಲೆಗಳ ಕುರಿತು ಮಾಹಿತಿಯೇ ಇಲ್ಲ. ದೇಶದ ಕರಾವಳಿಯ ಕೇರಳ ಹಾಗೂ ಕೊಂಕಣದ ಇತಿಹಾಸ ಹೆಚ್ಚು ಶ್ರೀಮಂತವಾಗಿದೆ. ಈ ಬಗ್ಗೆ ಅಧ್ಯಯನಕ್ಕೆ ಯುವಜನತೆ ಮುಂದೆ ಬರಬೇಕು ಎಂದವರು ಆಶಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಆದಿಮ ಕಲಾ ಪ್ರಕಾಶನ ಉದ್ಘಾಟಿಸಿ ಮಾಹೆಯ ಗಾಂಧೀಯನ್ ಸೆಂಟರಿನ ಮಾಜಿ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಅವರು ಕರ್ನಾಟಕ ಕರಾವಳಿಯ ಆದಿಮ ಕಲೆ ಪುಸ್ತಕವನ್ನು ಬಿಡುಗಡೆ ಮಾಡಿ, ಶುಭಹಾರೈಸಿದರು. ಪುಸ್ತಕದ ಕುರಿತು ಡಾ. ಆರ್. ಮೋಹನ್ ಮಾತನಾಡಿದರು.

ವಾರ್ಷಿಕೋತ್ಸವದ ನಿಮಿತ್ತ ಅವಿಭಜಿತ ದಕ ಜಿಲ್ಲೆಯ ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮರೆಯಲಾಗದ ಕರ್ನಾಟಕದ ಇತಿಹಾಸಕಾರರು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ. ರುರಾಮ್ ಶೆಟ್ಟಿ ಗುಳ್ಳಾಡಿ ಬಹುಮಾನ ವಿತರಿಸಿದರು.ಅವರು, ಗುಳ್ಳಾಡಿಯ ರಾಣಿ ಚಿಕ್ಕಾಯಿತಾಯಿ ವಿಜಯ ನಗರ ಸಾಮ್ರಾಜ್ಯದ ಸ್ಥಾಪಕಿಯಾಗಿದ್ದಳು. ಆದರೆ, ಈ ರಾಣಿಯ ಕುರಿತು ಹಾಗೂ ಅಳುಪರ ಕುರಿತು ಇತಿಹಾಸದಲ್ಲಿ ಯಾವುದೇ ಮಾಹಿತಿ ಇಲ್ಲ. ಪುರಾತತ್ವ ಸಂಶೋಧಕರಾದ ಪ್ರೊ.ಟಿ. ಮುರುಗೇಶಿ ಅವರು ರಾಣಿ ಚಿಕ್ಕಾಯಿತಾಯಿಯ ಜೀವನ, ಸಾಧನೆ, ಇತಿಹಾಸ ತಿಳಿಸುವ ಪುಸ್ತಕ ಬರೆಯಬೇಕು ಎಂದು ಸಲಹೆ ಮಾಡಿದರು

ಆದಿಮ ಕಲಾ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಡಾ. ರಾಜೇಂದ್ರ ಕರ್ಕೇರ ಗೋವಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯುಸೂಫ್ ಹೈದರ್ ಉಪಸ್ಥಿತರಿದ್ದರು, ಕಾರ್ಯನಿರ್ವಾಹಕ ಸದಸ್ಯ ಪ್ರೊ. ಟಿ. ಮುರುಗೇಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೇಯಸ್ ಕೋಲ್ಪೆ ಕಾರ್ಯಕ್ರಮ ನಿರ್ವಹಿಸಿದರು.