ಕೊಪ್ಪಳದಲ್ಲಿ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿ

| Published : Sep 04 2025, 01:01 AM IST

ಕೊಪ್ಪಳದಲ್ಲಿ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಕಾರ್ಯ ಸೆ. 20ರಿಂದ ಅ. 7ರ ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದೆ. ಆಯಾ ತಾಲೂಕಿನ ತಹಸೀಲ್ದಾರ್‌ರು ಸಮೀಕ್ಷೆ ‌ಕಾರ್ಯಕ್ಕೆ ಬಿಇಒ ಶಿಕ್ಷಕರನ್ನು ಸರಿಯಾಗಿ ನೇಮಿಸಿದ್ದಾರೆ ಅಥವಾ ಇಲ್ಲವೆಂಬುದನ್ನು ಪರಿಶೀಲಿಸಬೇಕು.

ಕೊಪ್ಪಳ:

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಕೈಗೊಳ್ಳಲಿರುವ ಸಮೀಕ್ಷಾ ಕಾರ್ಯವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮೀಕ್ಷಾ ಕಾರ್ಯದ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಮೀಕ್ಷೆ ಕಾರ್ಯ ಸೆ. 20ರಿಂದ ಅ. 7ರ ವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಆಯಾ ತಾಲೂಕಿನ ತಹಸೀಲ್ದಾರ್‌ರು ಸಮೀಕ್ಷೆ ‌ಕಾರ್ಯಕ್ಕೆ ಬಿಇಒ ಶಿಕ್ಷಕರನ್ನು ಸರಿಯಾಗಿ ನೇಮಿಸಿದ್ದಾರೆ ಅಥವಾ ಇಲ್ಲವೆಂಬುದನ್ನು ಪರಿಶೀಲಿಸಬೇಕು. ವರ್ಗಾವಣೆ, ಡೆಪ್‌ಟೇಷನ್ ಮೇಲೆ ಶಿಕ್ಷಕರು ಬೇರೆಡೆ ಹೋಗಿದ್ದು ಈ ಎಲ್ಲ ಅಂಶವನ್ನು ಗಮನಿಸಿ ಗಣತಿದಾರರ ಸಮೀಕ್ಷಾ‌ ಪಟ್ಟಿ ತೈಯಾರಿಸಬೇಕೆಂದರು.

ಆರೋಗ್ಯ ‌ಸಮಸ್ಯೆ, ಚಿಕ್ಕ ಮಕ್ಕಳು ಇರುವ ಮಹಿಳಾ ಶಿಕ್ಷಕರು ಮತ್ತು ವಿಶೇಷ ಚೇತನ ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಬೇಡಿ. ಸಮೀಕ್ಷಾ ಕಾರ್ಯಕ್ಕೆ‌‌ ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರನ್ನು ಹಾಗೂ‌ 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಿ ಗಣತಿ ಕಾರ್ಯಕ್ಕೆ ಸಮಸ್ಯೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ತಾವೆಲ್ಲರೂ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ 3,55,361 ಕುಟುಂಬ ಅಂದಾಜಿಸಿದ್ದು 150 ಕುಟುಂಬಕ್ಕೆ ‌ಒಬ್ಬ ಗಣತಿದಾರರಂತೆ ಒಟ್ಟು 2370 ಗಣತಿದಾರರು ಬೇಕಾಗುತ್ತಾರೆ. 20 ಗಣತಿದಾರರಿಗೆ ಒಬ್ಬ ‌ಮೇಲ್ವಿಚಾರಕರಂತೆ 130 ಜನ ಮೇಲ್ವಿಚಾರಕರು ಮತ್ತು 50 ಮಾಸ್ಟರ್ ಟ್ರೈನರ್‌ ನೇಮಿಸಬೇಕು ಎಂದ ಅವರು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಬೇಕು. ಆಯಾ ಗ್ರಾಮ ಪಂಚಾಯಿತಿ ಮತ್ತು ನಗರ ವ್ಯಾಪ್ತಿಯ ಪ್ರದೇಶದಲ್ಲಿ ಅವಶ್ಯವಿರುವಷ್ಟು ಶಿಕ್ಷಕರು ಲಭ್ಯವಾಗದಿದ್ದಲ್ಲಿ ಇತರೆ ವಿವಿಧ ಇಲಾಖೆಯ ಎಫ್‌ಡಿಸಿ, ಎಸ್‌ಡಿಸಿ ನೇಮಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಅಪರ‌ ಜಿಲ್ಲಾಧಿಕಾರಿ ‌ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಜಿಲ್ಲಾ ‌ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ ಹೊಸಮನಿ, ಜಿಲ್ಲಾ ‌ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ್ ಮಾನೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ್, ಜಿಲ್ಲಾ ‌ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಅಜ್ಮಿರ್ ಅಲಿ ಹಾಗೂ ‌ಜಿಲ್ಲೆಯ ವಿವಿಧ ತಾಲೂಕಿನ ತಹಸೀಲ್ದಾರ್‌ರು ಸೇರಿದಂತೆ ಇತರರು ಉಪಸ್ಥಿತರಿದ್ದರು.