ಮೀನು ಸಂತತಿಗೆ ಮಾರಕವಾಗಿರುವ ‘ಮುರುಗೋಡು’ ಮೀನು ಹಿಡಿಯುವ ನೆಪದಲ್ಲಿ ಇತರೆ ಜಾತಿಯ ಮೀನುಗಳನ್ನೂ ಹಿಡಿದು ಸಾಗಾಟ ಮಾಡಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ಆರೋಪಿಸಿದರು. ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪದ ಕೆರೆಯಲ್ಲಿರುವ ಮೀನುಗಳನ್ನು ಹಿಡಿಯುವ ಕಾರ್ಯವನ್ನು ಪುರಸಭೆ ವತಿಯಿಂದ ಟೆಂಡರ್ ಮೂಲಕ ನಡೆಸಿ, ಅದರಿಂದ ಬರುವ ಆದಾಯವನ್ನು ಕೆರೆ ಹಾಗೂ ಉದ್ಯಾನವನದ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮೀನು ಸಂತತಿಗೆ ಮಾರಕವಾಗಿರುವ ‘ಮುರುಗೋಡು’ ಮೀನು ಹಿಡಿಯುವ ನೆಪದಲ್ಲಿ ಇತರೆ ಜಾತಿಯ ಮೀನುಗಳನ್ನೂ ಹಿಡಿದು ಸಾಗಾಟ ಮಾಡಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ಆರೋಪಿಸಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪದ ಕೆರೆಯಲ್ಲಿರುವ ಮೀನುಗಳನ್ನು ಹಿಡಿಯುವ ಕಾರ್ಯವನ್ನು ಪುರಸಭೆ ವತಿಯಿಂದ ಟೆಂಡರ್ ಮೂಲಕ ನಡೆಸಿ, ಅದರಿಂದ ಬರುವ ಆದಾಯವನ್ನು ಕೆರೆ ಹಾಗೂ ಉದ್ಯಾನವನದ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲೇಶಪುರದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಮಂಜ್ರಾಬಾದ್ ಕೋಟೆ, ಭೀಮೇಶ್ವರ ದೇವಸ್ಥಾನ, ಹಾರ್ಲೆ ಎಸ್ಟೇಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಪಟ್ಟಣದಲ್ಲಿಯೂ ಸಾರ್ವಜನಿಕರು ವಾಯುವಿಹಾರ ನಡೆಸಲು ಹಾಗೂ ಸಮಯ ಕಳೆಯಲು ಉತ್ತಮ ಸ್ಥಳಗಳ ಅಗತ್ಯವಿದೆ ಎಂದರು.

ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪದ ಕೆರೆಯ ಅಭಿವೃದ್ಧಿಗೆ ತಮ್ಮ ಪುರಸಭೆ ಸದಸ್ಯತ್ವದ ಅವಧಿಯಲ್ಲಿ ಸುಮಾರು ₹36 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಪುರಸಭೆ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಬೇಕಿದ್ದ ಸಂದರ್ಭದಲ್ಲಿ ಪುರಸಭೆಯ ಆಡಳಿತಾವಧಿ ಮುಕ್ತಾಯಗೊಂಡಿತ್ತು. ಬಳಿಕ ಕೆರೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಪ್ರಸ್ತುತ ಉತ್ತಮವಾಗಿ ರೂಪುಗೊಂಡಿದೆ ಎಂದು ಹೇಳಿದರು.

ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗಿದ್ದು, ಮೀನುಗಳನ್ನು ವೀಕ್ಷಿಸಲು ಪ್ರವಾಸಿಗರು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಮಕ್ಕಳು ಸೇರಿ ಹಲವು ಮಂದಿ ಬೆಳಗ್ಗೆ ಹಾಗೂ ಸಂಜೆ ಕೆರೆ ಆವರಣಕ್ಕೆ ಆಗಮಿಸಿ ಸಮಯ ಕಳೆಯುತ್ತಿದ್ದಾರೆ. ಇದರಿಂದ ಸ್ಥಳವು ಉತ್ತಮ ವಾಯುವಿಹಾರ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎಂದರು.

ಇತ್ತೀಚೆಗೆ ಕೆರೆಯಲ್ಲಿ ಮೀನುಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದ್ದು, ಕೆಲವರು ಮೀನು ಹಿಡಿದಿರುವ ಮಾಹಿತಿ ಲಭ್ಯವಾಗಿದೆ. ಮೀನು ಹಿಡಿಯುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ಕೆರೆಯಲ್ಲಿನ ಮೀನುಗಳನ್ನು ನಿಯಮಾನುಸಾರ ಟೆಂಡರ್ ಮೂಲಕ ಹಿಡಿಯಲು ಅವಕಾಶ ಕಲ್ಪಿಸಿ, ಅದರಿಂದ ಬರುವ ಆದಾಯವನ್ನು ಕೆರೆ ಹಾಗೂ ಉದ್ಯಾನವನದ ಅಭಿವೃದ್ಧಿಗೆ ಬಳಸಬೇಕು ಎಂದು ಒತ್ತಾಯಿಸಿದರು.

ಕೆರೆಯಲ್ಲಿರುವ ‘ಮುರುಗೋಡು’ ಮೀನು ಇತರ ಜಾತಿಯ ಮೀನುಗಳಿಗೆ ಹಾನಿ ಉಂಟುಮಾಡುತ್ತದೆ ಎಂಬ ಮಾಹಿತಿ ಇದ್ದು, ಈ ಹಿನ್ನೆಲೆಯಲ್ಲಿ ಮೀನುಗಳ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು. ಅನುಮತಿ ಇಲ್ಲದೆ ಮೀನು ಹಿಡಿದಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಧೀರ್ ಮತ್ತು ಪ್ರದೀಪ್ ಉಪಸ್ಥಿತರಿದ್ದರು.