ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿ ಹಾಗೂ ಸುವ್ಯವಸ್ಥಿತವಾಗಿ ನಡೆಸಬೇಕು.
ಕನ್ನಡಪ್ರಭ ವಾರ್ತೆ ಗದಗ
ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿ ಹಾಗೂ ಸುವ್ಯವಸ್ಥಿತವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಗದಗ ಜಿಲ್ಲೆಗೆ ವಹಿಸಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ನಿಮಿತ್ತ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಜಿಲ್ಲೆಗಳಿಂದ ಆಗಮಿಸುವ 14-17 ವಯೋಮಿತಿಯ ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ತಂಡಗಳಿಗೆ ಸೂಕ್ತ ವಸತಿ ಹಾಗೂ ಕ್ರೀಡಾಂಗಣಕ್ಕೆ ಬರಲು ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಬೇಕು. ಕ್ರೀಡಾಪಟುಗಳ ಪಟ್ಟಿ ಮತ್ತು ಸಮಯ ಪಾಲನೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳ ನಿಖರವಾದ ಸಂಖ್ಯೆ, ಆಗಮನದ ಸಮಯ ಮತ್ತು ಅವರ ತಂಗುವಿಕೆಯ ಪಟ್ಟಿಯನ್ನು ಸಮಿತಿಯು ಶೀಘ್ರವೇ ಸಿದ್ಧಪಡಿಸಿ ಸಲ್ಲಿಸಬೇಕು ಎಂದರು.
ಕುಸ್ತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ತುರ್ತು ವೈದ್ಯಕೀಯ ಸೇವೆ ಹಾಗೂ ಪ್ರಾಥಮಿಕ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಳದಲ್ಲಿ ಸದಾ ಸಿದ್ಧವಾಗಿಟ್ಟುಕೊಳ್ಳಬೇಕು. ಕ್ರೀಡಾಪಟುಗಳಿಗೆ ವ್ಯವಸ್ಥಿತವಾಗಿ ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡದಂತೆ ಸಾರಿಗೆ, ವಸತಿ, ಆಹಾರ, ಅರೋಗ್ಯ, ಊಟದ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು. ವೇದಿಕೆ ನಿರ್ವಹಣಾ ಸಮಿತಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.ಕ್ರೀಡಾಪಟುಗಳು ತರುವ ದಾಖಲೆಗಳಲ್ಲಿ ಯಾವುದೇ ಅಕ್ರಮ ಅಥವಾ ವಯೋಮಿತಿ ವಂಚನೆ ನಡೆಯದಂತೆ ತಡೆಯಲು, ಆನ್‌ಲೈನ್‌ನಲ್ಲಿ SATS ತಂತ್ರಾಂಶ ಹಾಗೂ ಶಾಲಾ ದಾಖಲೆಗಳನ್ನು ಕಡ್ಡಾಯವಾಗಿ ನೈಜವಾಗಿ ಪರಿಶೀಲಿಸಬೇಕು. ಪ್ರತಿಯೊಂದು ವಸತಿ ನಿಲಯಕ್ಕೂ ಒಬ್ಬೊಬ್ಬರು ಉಸ್ತುವಾರಿ, ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಕ್ರೀಡಾಪಟುಗಳ ಪಟ್ಟಿ, ಅಗತ್ಯ ಸೌಲಭ್ಯಗಳು ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.
ಕ್ರೀಡಾಪಟುಗಳಿಗೆ ಪಂದ್ಯ ನಡೆಸಲು ಸೂಕ್ತ ಮ್ಯಾಟ್ ವ್ಯವಸ್ಥೆ ಹಾಗೂ ಮೂರನೇ ತೀರ್ಪುಗಾರರ ನಿರ್ಧಾರಕ್ಕೆ ಅನುಕೂಲವಾಗುವಂತೆ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ ಮಾಡಬೇಕು. ತೀರ್ಪುಗಾರರು ಮತ್ತು ಅಫಿಷಿಯಲ್ಸ್ ಅವರ ನಿಖರ ಸಂಖ್ಯೆ ಹಾಗೂ ಕಾರ್ಯನಿರ್ವಹಣೆಯನ್ನು ಸ್ಪಷ್ಟಪಡಿಸಬೇಕು. ಪಂದ್ಯಾವಳಿಗೆ ಆಗಮಿಸುವ ಪೈಲ್ವಾನರ ಆಹಾರ ಶೈಲಿಗೆ ತಕ್ಕಂತೆ (ಚಪಾತಿ, ಧಾನ್ಯಗಳು ಇತ್ಯಾದಿ) ಪೌಷ್ಟಿಕ ಹಾಗೂ ಸತ್ವಯುತ ಆಹಾರದ ವ್ಯವಸ್ಥೆ ಮಾಡಬೇಕು. ಪಂದ್ಯಗಳು ನಿಗದಿತ ವೇಳಾಪಟ್ಟಿಯಂತೆ ಸಾಗುವಂತೆ ನೋಡಿಕೊಳ್ಳಬೇಕು. ಪಂದ್ಯಾವಳಿಯಲ್ಲಿ ಯಾವುದೇ ಸಣ್ಣ ಮಟ್ಟದ ನ್ಯೂನತೆಗಳಾಗದಂತೆ ಅಧಿಕಾರಿಗಳು ಶಿಸ್ತು ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.ಈ ವೇಳೆ ಜಿಪಂ ಸಿಇಒ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂದ್ಯಾವಳಿ ಸಂಘಟನಾ ಸಮಿತಿಯ ಪದಾಧಿಕಾರಿಗಳು ಇದ್ದರು.